ನವದೆಹಲಿ: ಸೀಲಿಂಗ್ ಫ್ಯಾನ್ ಯಾವ ಮನೆಯಲ್ಲಿರುವುದಿಲ್ಲ ಹೇಳಿ? ಚಳಿಗಾಲದಲ್ಲಿ ಇವುಗಳ ಬಳಕೆ ಕಡಿಮೆಯಿದ್ದರೂ, ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಇವುಗಳ ಬಳಕೆ ಹೆಚ್ಚಾಗುತ್ತದೆ. ಸೀಲಿಂಗ್ ಫ್ಯಾನ್‌ಗಳನ್ನು ಖರೀದಿಯೂ ಮುಂಬರುವ ತಿಂಗಳುಗಳಲ್ಲಿ ಹೆಚ್ಚಾಗುತ್ತದೆ. ಆದರೆ ಫೆಬ್ರವರಿ 2024 ರ ನಂತರ ಸೀಲಿಂಗ್ ಫ್ಯಾನ್ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು ಎಚ್ಚರವಹಿಸಬೇಕಾಗುತ್ತದೆ. ಏಕೆಂದರೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸಚಿವ ಪಿಯೂಷ್ ಗೋಯಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'X'(ಎಕ್ಸ್)ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಗ್ರಾಹಕರು ಮಾರ್ಗಸೂಚಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಲಾಂಚ್ಗೂ ಮುನ್ನವೇ ರೋಲ್ ರಾಯ್ಸ್ ಸ್ಪೆಕ್ಟರ್ ಕಾರು ಖರೀದಿಸಿದ ಬಿಲ್ಡರ್; ಈ ಕಾರಣಕ್ಕೆ ಸ್ವ್ಯಾಗ್ ಎಂದ ನೆಟ್ಟಿಗರು
ಮುಂದಿನ ವರ್ಷದಿಂದ ಸೀಲಿಂಗ್ ಫ್ಯಾನ್‌ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಗ್ರಾಹಕ ಸಚಿವಾಲಯವು ಗ್ರಾಹಕರ ಅನುಕೂಲಕ್ಕಾಗಿ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿದೆ. ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಜಾರಿಗೊಳಿಸಲಾಗುವುದು. ಹೀಗಾಗಿ ಫ್ಯಾನ್‌ಗಳನ್ನು ಖರೀದಿಸುವ ಮೊದಲು ಅವುಗಳ ಮೇಲೆ ಭಾರತೀಯ ಮಾನದಂಡಗಳ ಸಂಸ್ಥೆಯ ಗುರುತು ಅಥವಾ ಐಎಸ್ಐ ಮಾರ್ಕ್ ಅನ್ನು ಪರಿಶೀಲಿಸುವಂತೆ ಅವರು ಗ್ರಾಹಕರನ್ನು ಒತ್ತಾಯಿಸುತ್ತಾರೆ.
ಎಲ್ಲ ಫ್ಯಾನ್ ತಯಾರಕರು ಗುಣಮಟ್ಟ ನಿಯಂತ್ರಣದ ಆದೇಶಗಳನ್ನು ಪಾಲಿಸಲು ಸಚಿವಾಲಯ ನಿರ್ದೇಶಿಸಲಿದೆ. ಫೆಬ್ರವರಿ 2024 ರಿಂದ ಮಾರಾಟವಾಗುವ ಎಲ್ಲ ಸೀಲಿಂಗ್ ಫ್ಯಾನ್‌ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಂದ ಐಎಸ್ಐ ಮಾರ್ಕ್ ಅನ್ನು ಹೊಂದಿರಬೇಕು. ಈ ಗುರುತು ಇಲ್ಲದ ಉತ್ಪನ್ನಗಳನ್ನು ಮಾರಾಟ, ಸಂಗ್ರಹಣೆ ಅಥವಾ ರಫ್ತು ಮಾಡಲು ಅನುಮತಿಸಲಾಗುವುದಿಲ್ಲ.
ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಸಚಿವಾಲಯ ಸೂಚನೆ ಪ್ರಕಾರ, ಮೊದಲ ಬಾರಿ ಉಲ್ಲಂಘಿಸುವವರಿಗೆ 2 ಲಕ್ಷ ರೂ.ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಬಹುದು. 2ಕ್ಕೂ ಹೆಚ್ಚು ಬಾರಿ ಮತ್ತು ಪುನರಾವರ್ತಿತ ಅಪರಾಧಿಗಳಿಗೆ 5 ಲಕ್ಷ ರೂ.ದಂಡ ಅಥವಾ ಉತ್ಪನ್ನದ ಮೌಲ್ಯದ 10 ಪಟ್ಟು ಹೆಚ್ಚು ವಸೂಲಿಗೆ ಒಳಪಡಬಹುದು. ಇದು ಗ್ರಾಹಕರ ಸುರಕ್ಷತೆ ಮತ್ತು ಸ್ಥಳೀಯ ಸಣ್ಣ ಉದ್ಯಮಗಳ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.