Ganga Jal : ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವ ಎಂದೇ ಖ್ಯಾತಿ ಪಡೆದಿರುವ ಮಹಾ ಕುಂಭಮೇಳವು ಅಂತಿಮ ಹಂತಕ್ಕೆ ಬಂದಿದೆ. ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಯಲ್ಲಿ ಪ್ರಯಾಗ್ರಾಜ್ಗೆ ಪ್ರತಿದಿನ ಲಕ್ಷಾಂತರ ಮಂದಿ ಭೇಟಿ ನೀಡಿ ಶಾಹಿ ಸ್ನಾನ ಮಾಡುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳವಾಗಿರುವ ತ್ರೀವೇಣಿ ಸಂಗಮದಲ್ಲಿ ಮುಳುಗಿ ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ತಿವೇಣಿ ಸಂಗಮದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಮುಳುಗೇಳುತ್ತಿರುವುದರಿಂದ ನದಿ ನೀರಿನ ಸ್ವಚ್ಛೆತೆಯ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಗಂಗಾ ಜಲವನ್ನು ಟೆಸ್ಟ್ ಮಾಡುತ್ತಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಗಂಗಾ ನದಿಯ ನೀರನ್ನು ಟೆಸ್ಟ್ ಮಾಡಿದ ವ್ಯಕ್ತಿಗೆ ಕೊನೆಯಲ್ಲಿ ಅಚ್ಚರಿಯೊಂದು ಕಾದಿತ್ತು. ಅದೇನೆಂದು ತಿಳಿದುಕೊಳ್ಳಲು ಮುಂದೆ ಓದಿ.
ಅಂದಹಾಗೆ ಹಿಂದು ಸಂಸ್ಕೃತಿಯಲ್ಲಿ ದೇವತೆಯಾಗಿ ಪೂಜಿಸಲ್ಪಡುವ ಗಂಗಾ ನದಿಯು ಹಿಮಾಲಯದ ಗಂಗೋತ್ರಿ ಹಿಮನದಿಯ ಹಿಮಾವೃತ ಶಿಖರಗಳಿಂದ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಶತಮಾನಗಳಿಂದ, ಇದನ್ನು ಪವಿತ್ರ ನದಿಯೆಂದು ಪರಿಗಣಿಸಲಾಗಿದೆ. ಶುದ್ಧತೆ ಮತ್ತು ದೈವತ್ವವನ್ನು ಈ ನದಿ ಸಾಕಾರಗೊಳಿಸುತ್ತದೆ. ಗಂಗಾ ಅಥವಾ ಗಂಗಾ ಜಲದ ನೀರು ಪಾಪಗಳನ್ನು ಶುದ್ಧೀಕರಿಸುವ ಮತ್ತು ಆತ್ಮವನ್ನು ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ ಎಂದು ಹಿಂದುಗಳು ನಂಬಿದ್ದಾರೆ. ಇದು ಆಚರಣೆಗಳು, ಸಮಾರಂಭಗಳು, ತೀರ್ಥಯಾತ್ರೆ ಸೇರಿದಂತೆ ಯಾವುದೇ ಶುಭ ಸಮಾರಂಭಗಳಲ್ಲಿ ಕೇಂದ್ರ ಅಂಶವಾಗಿದೆ. ಗಂಗಾ ನೀರನ್ನು ಎಷ್ಟು ಪವಿತ್ರವೆಂದು ಪರಿಗಣಿಸಲಾಗುತ್ತದೆ ಎಂದರೆ ಬಹುತೇಕ ಪ್ರತಿಯೊಂದು ಭಾರತೀಯ ಮನೆಯಲ್ಲೂ ಗಂಗಾ ಜಲದ ಬಾಟಲಿ ಇದ್ದೇ ಇರುತ್ತದೆ.
ಒಂದೆಡೆ, ನಾವು ನದಿಗಳನ್ನು ಪವಿತ್ರವೆಂದು ಪರಿಗಣಿಸುತ್ತೇವೆ. ಆದರೆ, ಮತ್ತೊಂದೆಡೆ, ನಾವು ಅವುಗಳನ್ನು ಕೈಗಾರಿಕಾ ತ್ಯಾಜ್ಯ, ಒಳಚರಂಡಿ ಮತ್ತು ಪ್ಲಾಸ್ಟಿಕ್ ಅವಶೇಷಗಳಿಂದ ಕೊಳಕು ಮಾಡುತ್ತಿದ್ದೇವೆ. ಅನೇಕ ದೊಡ್ಡ ಜಲಮೂಲಗಳನ್ನು ಕುಡಿಯಲು ಮತ್ತು ಸ್ನಾನ ಮಾಡಲು ಯೋಗ್ಯವಲ್ಲದ ರೀತಿ ಮಾಡಿದ್ದೇವೆ. ಗಂಗಾ ನದಿಯು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಗಂಗಾ ನೀರು ಸ್ವಯಂ-ಶುದ್ಧೀಕರಣ ಗುಣಗಳನ್ನು ಹೊಂದಿದೆ ಎಂದು ಅನೇಕ ಜನರು ಇನ್ನೂ ನಂಬುತ್ತಾರೆ. ಅಲ್ಲದೆ, ಇದು ಚರ್ಚೆಯ ವಿಷಯವೂ ಆಗಿದೆ. ಗಂಗಾ ನದಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವತಃ ಉತ್ತರ ಪ್ರದೇಶ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅಲಹಾಬಾದ್ ನ್ಯಾಯಾಲಯಕ್ಕೆ ತಿಳಿಸಿದೆ.
ಆದಾಗ್ಯೂ, ಐಐಟಿ-ಕಾನ್ಪುರದ ಇತ್ತೀಚಿನ ಅಧ್ಯಯನವು ಅದಕ್ಕೆ ವಿರುದ್ಧವಾಗಿದೆ. ಗಂಗೋತ್ರಿಯಿಂದ ಋಷಿಕೇಶದವರೆಗಿನ ನೀರನ್ನು ಭಾರತೀಯ ಮಾನದಂಡಗಳ ಬ್ಯೂರೋ ನಿಗದಿಪಡಿಸಿದ 28 ನಿಯತಾಂಕಗಳ ಮೇಲೆ ಪರೀಕ್ಷಿಸಿತು ಮತ್ತು ನೀರು ಕುಡಿಯಲು ಯೋಗ್ಯವಾಗಿದೆ ಎಂದು ಕಂಡುಕೊಂಡಿದೆ. ಇದೇ ಸಂದರ್ಭದಲ್ಲಿ, ಪವಿತ್ರ ಗಂಗಾ ನೀರು ನಿಜಕ್ಕೂ ಶುದ್ಧ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಶು ಘಾಯ್ ಎಂಬ ಯುವಕ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಹರಿದ್ವಾರದಿಂದ ತಂದ ಗಂಗಾಜಲವನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ವಿಡಿಯೋದಲ್ಲಿ, ಆಶು ಒಂದು ಕ್ಯಾನ್ನಲ್ಲಿ ಗಂಗಾಜಲವನ್ನು ಸಂಗ್ರಹಿಸುತ್ತಿರುವುದನ್ನು ಕಾಣಬಹುದು. ಅವರು ಸೂಕ್ಷ್ಮದರ್ಶಕದ ಅಡಿಯಲ್ಲಿ ನೀರನ್ನು ಇಟ್ಟು ಪರೀಕ್ಷೆ ಮಾಡುತ್ತಾರೆ. ಈ ವೇಳೆ ನೀರಿನಲ್ಲಿ ಯಾವುದೇ ಕಲ್ಮಶಗಳಾಗಲಿ ಅಥವಾ ಸೂಕ್ಷ್ಮಜೀವಿಗಳಾಗಲಿ ಕಂಡುಬರುವುದಿಲ್ಲ. ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲು, ಆಶು ಘಾಯ್ ಅವರು ವೃತ್ತಿಪರ ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯುತ್ತಾರೆ.
40X ಸೂಕ್ಷ್ಮದರ್ಶಕದ ಅಡಿಯಲ್ಲಿಯೂ ಸಹ ಗಂಗಾಜಲದಲ್ಲಿ ಯಾವುದೇ ಮಾಲಿನ್ಯಕಾರಕಗಳು ಅಥವಾ ಸೂಕ್ಷ್ಮಜೀವಿಗಳು ಗೋಚರಿಸುವುದಿಲ್ಲ ಎಂದು ಪ್ರಯೋಗಾಲಯದ ತಜ್ಞರು ದೃಢಪಡಿಸುತ್ತಾರೆ. ನಂತರ ತಜ್ಞರು ಗಂಗಾ ನೀರನ್ನು ಕೆಲವು ದಿನಗಳವರೆಗೆ ಇಟ್ಟು, ನಂತರ ಪರೀಕ್ಷೆ ಮಾಡುತ್ತಾರೆ. ಆಗಲೂ ನೀರು ಕೋಲಿಫಾರ್ಮ್ ಸೇರಿದಂತೆ ಸೂಕ್ಷ್ಮಜೀವಿಗಳಿಂದ ಮುಕ್ತವಾಗಿತ್ತು. 2024 ನವೆಂಬರ್ 25ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 25 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 14 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ನೆಟ್ಟಿಗರು ಕಾಮೆಂಟ್ ಮಾಡಿ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕವಾಗಿ ಆಧ್ಯಾತ್ಮಿಕ ಮಹತ್ವಕ್ಕಾಗಿ ಪೂಜಿಸಲ್ಪಡುವ ಗಂಗಾ ನದಿಯು ಇಂದು ಮಾಲಿನ್ಯದ ಪ್ರಮುಖ ಸವಾಲನ್ನು ಎದುರಿಸುತ್ತಿದೆ. ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯು ಅನೇಕ ಪ್ರದೇಶಗಳಲ್ಲಿ ಈ ನೀರು ಕುಡಿಯಲು ಅನರ್ಹವಾಗಿದೆ ಎಂದು ದೃಢಪಡಿಸಿದ್ದರೂ, ಐಐಟಿ-ಕಾನ್ಪುರದ ಇತ್ತೀಚಿನ ಅಧ್ಯಯನವು ಗಂಗೋತ್ರಿ ಮತ್ತು ಋಷಿಕೇಶ ನಡುವಿನ ನದಿಯ ಕೆಲವು ಭಾಗಗಳು ಇನ್ನೂ ಶುದ್ಧವಾಗಿವೆ ಮತ್ತು ಬಳಕೆಗೆ ಯೋಗ್ಯವಾಗಿವೆ ಎಂದು ತೋರಿಸಿದೆ. ಆದಾಗ್ಯೂ, ಮಾಲಿನ್ಯವು ನದಿಯ ಒಟ್ಟಾರೆ ಆರೋಗ್ಯಕ್ಕೆ ಗಂಭೀರ ಕಾಳಜಿಯಾಗಿ ಉಳಿದಿದೆ ಎಂಬ ಅಂಶವನ್ನು ತಳ್ಳಿಹಾಕುವಂತಿಲ್ಲ. ಈ ಪವಿತ್ರ ನೀರಿನ ಮೂಲವನ್ನು ರಕ್ಷಿಸಲು ಮತ್ತು ಪುನಃಸ್ಥಾಪಿಸಲು ನಿರಂತರ ಪ್ರಯತ್ನಗಳ ಅಗತ್ಯವನ್ನು ಅನೇಕ ಸಂಶೋಧನೆಗಳು ಒತ್ತಿಹೇಳುತ್ತವೆ. (ಏಜೆನ್ಸೀಸ್)