ನ್ಯೂಸ್

ಸಾಲ ತೀರಿಸೆಂದು ಬೆನ್ನು ಬಿದ್ದರು; ವರ್ತಕ ದಂಪತಿ ವಿಷ ಕುಡಿದರು

ರಾಜ್​ಕೋಟ್​: ವ್ಯಾಪಾರ-ವಹಿವಾಟು ಮಾಡಲು ತೆಗೆದುಕೊಂಡಿದ್ದ ಸಾಲವನ್ನು ಮರಳಿಸುವಂತೆ ಸಾಲಗಾರರು ವಿಪರೀತ ಕಾಟ ಕೊಟ್ಟಿದ್ದರಿಂದ ಬೇಸತ್ತ ವರ್ತಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೇಟ್​ಪುರ್​ ಬಡಾವಣೆಯ ಗುಜರಾತಿ ವಾಡಿ ನಿವಾಸಿ ಅಲ್ಪೇಶ್​ ಕನ್ಹಯ್ಯ ಮತ್ತು ಇವರ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಪೇಶ್ ಸಿದ್ಧ ಉಡುಪುಗಳ ಮಾರಾಟ ಮಳಿಗೆ ಹೊಂದಿದ್ದರು. ವಹಿವಾಟು ವಿಸ್ತರಣೆಗಾಗಿ 15ರಿಂದ 20 ಲಕ್ಷ ರೂ. ಸಾಲ ಮಾಡಿದ್ದರು. ಆದರೆ, ಇದೇ ಸಂದರ್ಭದಲ್ಲಿ ಕೋವಿಡ್​-19 ಲಾಕ್​ಡೌನ್​ ಜಾರಿಗೊಂಡ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಸಾಲಗಾರರು ಹಣ ಹಿಂದಿರುಗಿಸುವಂತೆ ಇವರ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಈ ಬಗ್ಗೆ ತಮ್ಮ ಸಹೋದರ ವಿವೇಕ್​ ಕನ್ಹಯ್ಯ ಅವರ ಬಳಿ ಅಲ್ಪೇಶ್​ ಹೇಳಿಕೊಂಡಿದ್ದರು ಎನ್ನಲಾಗಿದೆ.

ಆದರೂ ಸಾಲಗಾರರ ಒತ್ತಡ ಕಡಿಮೆಯಾಗದ್ದರಿಂದ, ದಂಪತಿ ವಿಷ ಸೇವಿ ಆತ್ಮಹತ್ಯೆಗೆ ಮುಂದಾಗಿದ್ದರು. ವಿಷ ಸೇವಿಸಿದ ಬಳಿಕ ಇವರ ಒದ್ದಾಟ ಮತ್ತು ಕಿರುಚಾಟವನ್ನು ಕೇಳಿಸಿಕೊಂಡ ನೆರೆಹೊರೆಯವರು ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸ್ವಲ್ಪ ಚೇತರಿಕೆ ತೋರಿದ್ದ ಸಂದರ್ಭದಲ್ಲಿ ತಾನು ಯಾರು ಯಾರಿಂದ ಎಷ್ಟೆಷ್ಟು ಹಣ ಪಡೆದಿದ್ದೇನೆ ಎಂಬ ಮಾಹಿತಿಯನ್ನು ಲೆಕ್ಕದ ಪುಸ್ತಕದಲ್ಲಿ ಬರೆದಿಟ್ಟಿರುವುದಾಗಿ ಅಲ್ಪೇಶ್​ ತನ್ನ ಸಹೋದರನಿಗೆ ತಿಳಿಸಿದ್ದರು ಎನ್ನಲಾಗಿದೆ.

ಮಂಗಳವಾರದಿಂದ ಚಕಿತ್ಸೆ ಪಡೆದುಕೊಳ್ಳುತ್ತಿದ್ದ ದಂಪತಿ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಇದೀಗ ಅಲ್ಪೇಶ್​ ಅವರ ಅಂಗಡಿಯನ್ನು ತೆರೆದ ಬಳಿಕ ಅಲ್ಲಿರುವ ಲೆಕ್ಕಪುಸ್ತಕಗಳನ್ನು ಪರಿಶೀಲಿಸಿ, ಅದರಲ್ಲಿರುವ ಹೆಸರುಗಳನ್ನು ಗುರುತಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ಧಾರೆ.