ನ್ಯೂಸ್

ಮ್ಯಾನ್ಮಾರ್​ನಲ್ಲಿ ಉಗ್ರರ ಶಿಬಿರದ ಮೇಲೆ ಭಾರತ ಬಾಂಬ್‌ ದಾಳಿ!

ಗುವಾಹಟಿ: ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತ ಡ್ರೋನ್‌ ಮೂಲಕ ಬಾಂಬ್‌ ದಾಳಿ ನಡೆಸಿದೆ.

ಭಾನುವಾರ ತನ್ನ ಶಿಬಿರದ ಮೇಲೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ ಎಂದು ಪರೇಶ್ ಬರುವಾ ನೇತೃತ್ವದ ಉಲ್ಫಾ-I ಸೋಮವಾರ ಹೇಳಿಕೊಂಡಿದೆ.

ಭಾನುವಾರ ಸಂಜೆ 4:10, 4:12 ಮತ್ತು 4:20 ಕ್ಕೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಡ್ರೋನ್‌ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ನಡೆಸಿವೆ ಎಂದು ಸಂಘಟನೆ ಹೇಳಿಕೊಂಡಿದೆ.

ಮೊದಲ ಎರಡು ಸ್ಫೋಟಗಳಲ್ಲಿ ನಮ್ಮ ಸಂಘಟನೆಯ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರನೇ ಬಾಂಬ್ ಸ್ಫೋಟಿಸಲಿಲ್ಲ. ಈ ರೀತಿಯ ದಾಳಿಯಿಂದ ನಾವು ನಮ್ಮ ಉದ್ದೇಶದಿಂದ ವಿಚಲಿತಗೊಳ್ಳುವುದಿಲ್ಲ ಎಂದು ಉಲ್ಫಾ ಉಗ್ರರು ಹೇಳಿಕೊಂಡಿದ್ದಾರೆ.

ಆದರೆ ಭಾರತದ ವಿದೇಶಾಂಗ ಸಚಿವಾಲಯ ಈ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.