ನ್ಯೂಸ್

ಟ್ರಂಪ್ & ಝೆಲೆನ್ಸ್ಕಿ ನಡುವಿನ ಫೈಟ್​​​; ಜಗಳ ನೋಡುತ್ತಿದ್ದ ಯುಕ್ರೇನ್ ರಾಯಭಾರಿ ರಿಯಾಕ್ಷನ್​​ ವೈರಲ್ | Zelensky-Trump Clash

ವಾಷಿಂಗ್ಟನ್​ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಭೇಟಿಯು ಪ್ರಸ್ತುತ ಪ್ರಪಂಚದಾದ್ಯಂತದ ಪ್ರಮುಖ ಸುದ್ದಿಯಾಗಿದೆ. ಶ್ವೇತಭವನದಲ್ಲಿ ಎರಡೂ ದೇಶಗಳ ನಾಯಕರ ಭೇಟಿಯ ಸಂದರ್ಭದಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Zelensky-Trump Clash) ನಡುವಿನ ಹೈವೋಲ್ಟೇಜ್​ ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಕಂಡುಬಂದಿದೆ. ಟ್ರಂಪ್ ಝೆಲೆನ್ಸ್ಕಿ ಅಮೆರಿಕವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು ಮತ್ತು ಯುಕ್ರೇನಿಯನ್​ ಅಧ್ಯಕ್ಷರ ಕ್ರಮಗಳು ಮೂರನೇ ಮಹಾಯುದ್ಧವನ್ನು ಪ್ರಚೋದಿಸುವಂತಿದೆ ಎಂದು ಟ್ರಂಪ್​ ಹೇಳಿದ್ದಾರೆ.

ವಿವಾದದ ನಂತರ ನಿಗದಿಯಾಗಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು. ಝೆಲೆನ್ಸ್ಕಿ ಯಾವುದೇ ಒಪ್ಪಂದವಿಲ್ಲದೆ ಶ್ವೇತಭವನವನ್ನು ತೊರೆದರು. ಝೆಲೆನ್ಸ್ಕಿ ಅವರು ಖನಿಜ ಒಪ್ಪಂದಕ್ಕಾಗಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ನೀವು ಒಪ್ಪಂದ ಮಾಡಿಕೊಳ್ಳಿ ಅಥವಾ ನಾವು (ಶಾಂತಿ ಪ್ರಕ್ರಿಯೆಯಿಂದ) ಹೊರಗುಳಿಯುತ್ತೇವೆ ಎಂದು ಟ್ರಂಪ್​ ಯುಕ್ರೇನ್ ಮೇಲೆ ಒತ್ತಡ ಹೇರಿದರು. ಇದಾದ ಸ್ವಲ್ಪ ಸಮಯದ ನಂತರ ಝೆಲೆನ್ಸ್ಕಿ ಅಮೆರಿಕದೊಂದಿಗೆ ಪ್ರಮುಖ ಖನಿಜ ಒಪ್ಪಂದಕ್ಕೆ ಸಹಿ ಹಾಕದೆ ಇದ್ದಕ್ಕಿದ್ದಂತೆ ಶ್ವೇತಭವನವನ್ನು ತೊರೆದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ರಾಜತಾಂತ್ರಿಕ ಘರ್ಷಣೆಯನ್ನು ನೋಡಿದ ನಂತರ ಯುಕ್ರೇನ್​ನ ಅಮೆರಿಕದ ರಾಯಭಾರಿ ಒಕ್ಸಾನಾ ಮಾರ್ಕರೋವಾ ಅವರ ಪ್ರತಿಕ್ರಿಯೆ ಜಾಲತಾಣದಲ್ಲಿ ಹರಿದಾಡುತ್ತಿದೆ.ಯುಕ್ರೇನಿಯನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಚರ್ಚೆಯ ಸಮಯದಲ್ಲಿ ಸಾಕಷ್ಟು ಅಸಮಾಧಾನಗೊಂಡಂತೆ ಕಂಡುಬಂದರು.ವೈರಲ್​ ವಿಡಿಯೋದಲ್ಲಿ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವಿನ ಬಿಸಿ ಚರ್ಚೆಯ ಸಮಯದಲ್ಲಿ ಒಕ್ಸಾನಾ ಮಾರ್ಕರೋವಾ ತಲೆ ಅಲ್ಲಾಡಿಸುತ್ತಾ ಮತ್ತು ತನ್ನ ಕೈಗಳಿಂದ ಮುಖವನ್ನು ಮುಚ್ಚಿಕೊಳ್ಳುವುದನ್ನು ಕಾಣಬಹುದು.

ಇಬ್ಬರು ನಾಯಕರ ನಡುವೆ ಸುಮಾರು 40 ನಿಮಿಷಗಳ ಕಾಲ ಸೌಹಾರ್ದಯುತ ಸಂಭಾಷಣೆ ನಡೆಯಿತು. ಆದರೆ ಕೊನೆಯ 10 ನಿಮಿಷಗಳಲ್ಲಿ ವಿಷಯಗಳು ಹದಗೆಟ್ಟವು.(ಏಜೆನ್ಸೀಸ್​​)