ನ್ಯೂಸ್

ಪತಿ ಜತೆ ಜಗಳವಾಡಿ ಪ್ರಿಯಕರನ​ ಮನೆಗೆ ಹೋದಳು: ಮುಂದೆ ನಡೆದಿದ್ದು ಇಬ್ಬರ ದುರಂತ ಅಂತ್ಯ!

ಕಾಚಿಗುಡ: ವಿವಾಹೇತರ ಸಂಬಂಧ ಬಯಲಿಗೆ ಬರುತ್ತಿದ್ದಂತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಕಾಚಿಗುಡದಲ್ಲಿ ನಡೆದಿದೆ.

ಕಾಚಿಗುಡದ ಚಪ್ಪಲ್​​ ಬಜಾರ್​ನಲ್ಲಿ ವಾಸವಿದ್ದ ಕರ್ನಾಟಕ ಮೂಲದ ಆಟೋ ಚಾಲಕ ಹನಮಂತು (23) ಮತ್ತು ಅದೇ ಏರಿಯಾದಲ್ಲಿ ವಾಸವಿದ್ದ ಮಹಾರಾಷ್ಟ್ರದ ಲಾತುರ್​ ಮೂಲದ 23 ವರ್ಷದ ಮಹಿಳೆ ಮೃತ ದುರ್ದೈವಿಗಳು.

ಕೆಲವು ದಿನಗಳಿಂದ ಹನುಮಂತು ಜತೆ ಮಹಿಳೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮಹಿಳೆಯ ಪತಿಗೆ ತಿಳಿದು ಇಬ್ಬರ ನಡುವೆ ಜ. 11ರಂದು ಗಲಾಟೆ ನಡೆದಿತ್ತು. ಅದೇ ದಿನ ಸಂಜೆ ಮಹಿಳೆ ಮನೆ ಬಿಟ್ಟು ಹೊರ ಹೋಗಿದ್ದಳು. ಇದರ ಬೆನ್ನಲ್ಲೇ ಪತಿ ಕಾಚಿಗುಡ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದ.

ಮಹಿಳೆಯು ಚಪ್ಪಲ್ ಬಜಾರ್​​ನಲ್ಲಿರುವ ಬಾಯ್​ಫ್ರೆಂಡ್​ ಹನಮಂತು ಮನೆಗೆ ಹೋಗಿದ್ದಳು. ಅದೇ ದಿನ ಇಬ್ಬರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹನುಮಂತು ನೇಣಿಗೆ ಶರಣಾದರೆ, ಮಹಿಳೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಮಂಗಳವಾರ ರಾತ್ರಿ ಆತ್ಮಹತ್ಯೆ ವಿಚಾರವನ್ನು ಸ್ಥಳೀಯರು ಕಾಚಿಗುಡ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಒಸ್ಮಾನಿಯಾ ಶವಗಾರಕ್ಕೆ ಶವಪರೀಕ್ಷೆಗಾಗಿ ಕಳುಹಿಸಿದರು. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)