ನ್ಯೂಸ್

ಮರಳು ದಿಬ್ಬ ಕುಸಿದು ಇಬ್ಬರು ಸತ್ತರೂ ಪ್ರಕರಣದ ದಿಕ್ಕು ತಪ್ಪಿಸಲು ಅಪಘಾತದ ಕಥೆ ಕಟ್ಟಿದ್ರು..?

ಹಾಸನ: ಮರಳು ದಂಧೆಗೆ ಎರಡು ಜೀವ ಬಲಿಯಾಗಿದೆ. ಆದರೆ, ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ಕಥೆ ಕಟ್ಟಿ ಪ್ರಕರಣದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಚನ್ನರಾಯಪಟ್ಟಣ ತಾಲೂಕು ಸಂತೇಶಿವರ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮರಳು ತುಂಬಲು ಬೆಂಗೆನಹಳ್ಳಿಯ ರಘು ಎಂಬಾತ ಟ್ರ್ಯಾಕ್ಟರ್‌ನಲ್ಲಿ ಚಿನಗೋನಹಳ್ಳಿಯ ಮಹಾಲಿಂಗ ಮತ್ತು ರುದ್ರೇಶ್ ಅವರನ್ನು ಮಂಗಳವಾರ ರಾತ್ರಿ ಕರೆದುಕೊಂಡು ಹೋಗಿದ್ದ. ಈ ವೇಳೆ ಮರಳು ಗುಡ್ಡೆ ಕುಸಿದು ಮಹಾಲಿಂಗ (35) ಮತ್ತು ರುದ್ರೇಶ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಕ್ರಮವಾಗಿ ಮರಳು ತುಂಬುತ್ತಿದ್ದಾಗ ಅವಘಡ ಸಂಭವಿಸಿದ್ದರಿಂದ ಪ್ರಕರಣ ಬೇರೆ ತಿರುವು ಪಡೆಯುತ್ತದೆ ಎಂದು ಅರಿತ ರಘು, ಇಬ್ಬರ ಶವಗಳನ್ನು ರಸ್ತೆ ಪಕ್ಕ ಇರಿಸಿ ಅಪಘಾತ ಆಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮೃತರ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇನ್ನೂ ಪ್ರಕರಣ ದಾಖಲಾಗಿಲ್ಲ.