ನ್ಯೂಸ್

ಆಟ ಆಡುತ್ತಿದ ವೇಳೆ ಅವಘಡ! ಹೊಲದ ಬದಿಯಲ್ಲಿದ್ದ ಬಂಡೆ ಅಡಿ ಸಿಲುಕಿ ಇಬ್ಬರು ಮಕ್ಕಳು ಸಾವು

ರಾಯಚೂರು: ಹೊಲದ ಬದಿಗೆ ಇರಿಸಲಾಗಿದ್ದ ಬೃಹತ್ ಗಾತ್ರದ ಬಂಡೆ ಬಳಿ ಆಟ ಆಡುತ್ತಿದ್ದ ಇಬ್ಬರು ಮಕ್ಕಳು (Two Kids) ಬಂಡೆಯಡಿ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಸಂಭವಿಸಿದೆ.

ಬಂಡೆ ಮೇಲೆ ಕುಳಿತು ಆಟವಾಡುವ ವೇಳೆ ಬಂಡೆ ದಿಢೀರ್​ ಉರುಳಿದ್ದರಿಂದ ಮಕ್ಕಳು ತಪ್ಪಿಸಿಕೊಳ್ಳಲಾಗದೆ, ಅದರ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕನ ಕಾಲಿನ ಮೂಳೆ ಮುರಿತ ಕಂಡಿದೆ. ಬಂಡೆಗೆ ಸಿಲುಕಿ ಸಾವನ್ನಪ್ಪಿದ ಮಕ್ಕಳನ್ನು ಮಂಜುನಾಥ್ (9), ವೈಶಾಲಿ (6) ಎಂದು ಗುರುತಿಸಲಾಗಿದ್ದು, ರಘು (8) ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.

ಮಳೆಯಿಂದಾಗಿ ಬಂಡೆಯ ಅಡಿಯ ಮಣ್ಣು ಸವೆದು ಬಂಡೆ ಉರುಳಿದೆ ಎಂದು ಲಿಂಗಸೂಗೂರು ಡಿಎಸ್ಪಿ ದತ್ತಾತ್ರೇಯ ಕರ್ನಾಡ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.