

ಚಾಮರಾಜನಗರ: ಮುಸ್ಲಿಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮಜ್ಲಿಸ್-ಎ-ಇಲ್ಮಿಯಾ ಪ್ರತಿನಿಧಿ ಮಹಮ್ಮದ್ ಇಸ್ಮಾಯಿಲ್ ಒತ್ತಾಯಿಸಿದರು.
ಉತ್ತರಪ್ರದೇಶದ ಘಾಜಿಯಾ ಬಾದ್‌ನಲ್ಲಿ ಯತಿನಾರಸಿಂಘಾನಂದ(ದೀಪಕ್ ತ್ಯಾಗಿ) ಮತ್ತು ಆತನ ಸಹಚರರಾದ ಅನಿಲ್ ಯಾದವ್, ರಣಸಿಂಗ್ ಆನಂದ್ ಗಿರಿ, ನಿರ್ಧಾರಣ್ ಹಾಗೂ ಇತರರು ಯೂಟ್ಯೂಬ್ ಮತ್ತು ಇತರೆ ಚಾನೆಲ್‌ಗಳಲ್ಲಿ ಮುಸ್ಲಿಂ ಸಮುದಾಯದ ಪೈಗಂಬರರ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ. ಈ ಮೂಲಕ ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಇವರ ವಿರುದ್ಧ ಕೇಂದ್ರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಕಠಿಣ ಕಾನೂನುಕ್ರಮ ಜರುಗಿಸಬೇಕು ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಹಿಂದೆಯೂ ಧಾರ್ಮಿಕ ಅಸಹಿಷ್ಣುತೆ, ಕೋಮು ಪ್ರಚೋದನಾಕಾರಿ ಹೇಳಿಕೆ ಮತ್ತು ಸಮುದಾಯಗಳ ವಿರುದ್ಧ ದ್ವೇಷ ಮನೋಭಾವನೆ ಉಂಟು ಮಾಡುತ್ತಿರುವ ಇವರ ವಿರುದ್ಧ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಕ್ರಮವಹಿಸುವಲ್ಲಿ ವಿಫಲವಾಗಿದೆ. ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಈಗಾಗಲೇ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್, ಚುಡಾ ಮಾಜಿ ಅಧ್ಯಕ್ಷ ಸೈಯದ್ ರಫಿ, ಮುಖಂಡರಾದ ಮೌಲಾನ ಕಿಜರ್ ಅಹಮದ್, ಸೈಯದ್ ಇಮ್ತಿಯಾಜ್, ಅಬ್ದುಲ್ ಅಲೀಮ್, ಹಾಫಿಜ್ ಸಮೀ ಉಲ್ಲಾ ಹಾಜರಿದ್ದರು.