ನ್ಯೂಸ್

ಮುಂದುವರೆದ ಕಾಂಗ್ರೆಸ್​ ಶಾಸಕರ ರಾಜೀನಾಮೆ: ಇಂದು ಪಕ್ಷ ತೊರೆದ ಇಬ್ಬರು ನಾಯಕರು

ಗಾಂಧಿನಗರ (ಗುಜರಾತ್​): ಗುಜರಾತ್​ ರಾಜ್ಯಸಭಾ ಚುನಾವಣೆಗೆ ಇನ್ನೆರಡು ವಾರಗಳು ಮಾತ್ರ ಇವೆ. ಜೂನ್​ 19ರಂದು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಇದಾಗಲೇ ಇಬ್ಬರು ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಪಟೇಲ್​ ಅವರು ವಡೋದರಾದ ಕರ್ಜನ್ ಸ್ಥಾನದಿಂದ ಹಾಗೂ ಚೌಧರಿ ವಲ್ಸಾದ್‌ನ ಕಪ್ರದ ಸ್ಥಾನದಿಂದ ಗೆದ್ದಿದ್ದರು.

ಇವರಿಬ್ಬರ ರಾಜೀನಾಮೆಯನ್ನು ಸ್ಪೀಕರ್​ ಅಂಗೀಕರಿಸಿದ್ದು, ಈ ಕುರಿತು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮಾರ್ಚ್​ನಲ್ಲಿಯೇ ಕಾಂಗ್ರೆಸ್ಸಿನ ಐವರು ಶಾಸಕರು ರಾಜೀನಾಮೆ ನೀಡಿದ್ದರು.

ಗುಜರಾತಿನಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಬಿಜೆಪಿಯಿಂದ ಮೂವರು ಮತ್ತು ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಅಭಯ್ ಭಾರದ್ವಾಜ್, ರಮಿಲಾ ಬಾರಾ ಮತ್ತು ನರ್ಹಾರಿ ಅಮೀನ್ ಹಾಗೂ ಕಾಂಗ್ರೆಸ್​ನಿಂದ ಶಕ್ತಿಸಿಂಹ್ ಗೋಹಿಲ್ ಮತ್ತು ಭರತ್ ಸಿಂಹ್ ಸೋಲಂಕಿ ಚುನಾವಣೆಗೆ ಕಣದಲ್ಲಿದ್ದಾರೆ.

182 ಸದಸ್ಯರನ್ನು ಒಳಗೊಂಡಿರುವ ಗುಜರಾತ್​ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ 103 ಶಾಸಕರು ಇದ್ದರೆ, ಕಾಂಗ್ರೆಸ್​ನ 66 ಶಾಸಕರು ಇದ್ದರು.

ಕಾಂಗ್ರೆಸ್​ನ ಶಾಸಕರಾದ ಕಿರಿತ್ ಪಟೇಲ್, ಲಲಿತ್ ವಾಸೋಯಾ ಮತ್ತು ಲಲಿತ್ ಕಗಥರಾ ಅವರು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಇದು ರಾಜಕೀಯ ವಲಯದಲ್ಲಿ ಬಹಳ ಚರ್ಚೆಗೆ ಒಳಗಾಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ನಿರಾಕರಿಸಿರುವ ಶಾಸಕರು, ತಾವು ಕರೊನಾವೈರಸ್​ ಕುರಿತಂತೆ ಚರ್ಚೆಗೆ ಹೋಗಿರುವುದಾಗಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆಯು ಮಾರ್ಚ್ 26ರಂದು ನಡೆಯಬೇಕಿತ್ತು. ಕರೊನಾ ವೈರಸ್​ ಹಾಗೂ ಲಾಕ್​ಡೌನ್​ ಹಿನ್ನೆಲೆಯಲ್ಲಿ, ಇದನ್ನು ಜೂನ್​ 19ಕ್ಕೆ ಮುಂದೂಡಲಾಗಿದೆ.