ಪೋರಬಂದರ್: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಗೆ ಎಂದು ತೆರಳಿದ್ದ ಐವರು ಮೀನುಗಾರರು ನೀರಿನ ಮೇಲೆ ತೇಲುತ್ತಿದ್ದ ಕ್ಯಾನ್ ಅನ್ನು ಕೈಗೆತ್ತಿಕೊಂಡು, ಅದರಲ್ಲಿದ್ದ ದ್ರವವನ್ನು ಸೇವಿಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥರಾದ ಐದು ಜನರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಇಬ್ಬರು ಆಸ್ಪತ್ರೆಯಲ್ಲೇ ಮೃತಪಟ್ಟಿರುವ ಘಟನೆ ಗುಜರಾತ್‌ನ ಪೋರಬಂದರ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ನನ್ನದೂ ಹಿಟ್ ಆ್ಯಂಡ್ ರನ್ ಜಾಯಮಾನವಲ್ಲ; ಮಾಜಿ ಸಿಎಂ ಎಚ್ಡಿಕೆ ಆರೋಪಕ್ಕೆ ಡಿ.ಕೆ. ಶಿವಕುಮಾರ್ ತಿರುಗೇಟು
ಐವರು ಮೀನುಗಾರರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ. ವಿಠಲ್ ಪರ್ಮಾರ್ ಮತ್ತು ಸುರೇಶ್ ಜಾಬರ್ ಎಂಬ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ನಿಲಂ ಗೋಸ್ವಾಮಿ ತಿಳಿಸಿದ್ದಾರೆ.
ಘಟನೆಯ ವಿವರ: ಪೊಲೀಸರು ನೀಡಿದ ಮಾಹಿತಿ ಅನುಸಾರ, "ಮೀನುಗಾರಿಕೆಗೆ ತೆರಳಿದ್ದ ವೇಳೆ, ಸಮುದ್ರದಲ್ಲಿ ತೇಲುತ್ತಿದ್ದ ಐದು ಲೀಟರ್ ಸೀಲ್ ಮಾಡಿದ ಕ್ಯಾನ್ ಅನ್ನು ಮೀನುಗಾರರು ಗಮನಿಸಿದ್ದಾರೆ. ಕೂಡಲೇ ಅದನ್ನು ಕೈಗೆತ್ತಿಕೊಂಡ ಐವರು, ಕ್ಯಾನ್ನೊಳಗೆ ಇದ್ದ ದ್ರವವನ್ನು ಪರೀಕ್ಷಿಸದೆ ಸೇವಿಸಿದ್ದಾರೆ. ಬಂದರಿಗೆ ಬಂದಿಳಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಮೀನುಗಾರ ಆಸ್ಪತ್ರೆಯಲ್ಲಿ ರಾತ್ರಿ ಮೃತಪಟ್ಟರೆ, ಮತ್ತೊಬ್ಬರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸಕೋಟೆ ಏತನೀರಾವರಿ ಯೋಜನೆಗೆ ಗಡುವು ವಿಧಿಸಿದ ಸಚಿವ
"ದ್ರವವು ನಕಲಿ ಮದ್ಯವಾಗಿರುವ ಸಾಧ್ಯತೆಯಿಲ್ಲ ಮತ್ತು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಹಿನ್ನಲೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).