ಮುಂಬೈ: ಪ್ರಭಾಸ್, ಕೃತಿ ಸನೂನ್ ಮತ್ತು ಸೈಫ್ ಅಲಿ ಖಾನ್ ನಟನೆಯ ಹಾಗೂ ಓಂ ರಾವತ್ ನಿರ್ದೇಶನ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಪೌರಾಣಿಕ ಮಹಾಕಾವ್ಯ ರಾಮಾಯಣ ಆಧಾರಿತ ಈ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಸಿನಿಮಾ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ರಾಮಾಯಣವನ್ನು ತಪ್ಪಾಗಿ ವಿವರಿಸಲಾಗಿದೆ ಎಂಬ ಆರೋಪ ಇದೆ. ಹೆಚ್ಚಿನ ಪ್ರೇಕ್ಷಕರು ವಿಎಫ್ಎಕ್ಸ್ ಅನ್ನು ದೂಷಿಸುತ್ತಿದ್ದಾರೆ ಮತ್ತು ಸಿನಿಮಾ ಡೈಲಾಗ್ಗಳು ಸಹ ಪೂರಕವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜಾಲತಾಣದಲ್ಲಿ ಆದಿಪುರುಷ್ ಸಿನಿಮಾ ಕುರಿತಾದ ಸಾಕಷ್ಟು ಟ್ರೋಲ್ ಮತ್ತು ಮೀಮ್ಸ್ಗಳು ಹರಿದಾಡುತ್ತಿದ್ದು, ಅದರಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಂಬಂಧಿಸಿದ ಮೀಮ್ಸ್ ಒಂದು ಎಲ್ಲರ ಗಮನ ಸೆಳೆದಿದೆ.
ಟ್ವಿಟ್ಟಿಗನೊಬ್ಬ ಆದಿಪುರುಷ್ ಸಿನಿಮಾದ ವಾನರ ಸೇನೆಯ ಪಾತ್ರಧಾರಿಯ ಮುಖವನ್ನು ಸಿಎಂ ಏಕನಾಥ್ ಶಿಂಧೆ ಮುಖಕ್ಕೆ ಹೋಲಿಸಿದ್ದಾನೆ. ಚಿತ್ರದಲ್ಲಿರುವ ವಾನರನ ಫೋಟೋ ಮತ್ತು ಸಿಎಂ ಶಿಂಧೆ ಫೋಟೋ ಎರಡನ್ನು ಒಟ್ಟಿಗೆ ಪೋಸ್ಟ್ ಮಾಡಿ, ನಿಮಗೆ ಗೊತ್ತಾ ಏಕನಾಥ್ ಶಿಂಧೆ ಅವರು ಆದಿಪುರುಷ್ ಸಿನಮಾದಲ್ಲಿದ್ದರು ಎಂದು ಬರೆಯುವ ಮೂಲಕ ಟ್ರೋಲ್ ಮಾಡಿದ್ದಾರೆ. ಅಲ್ಲದೆ, ಸಿಎಂ ಶಿಂಧೆ ಅವರ ಅಧಿಕೃತ ಟ್ವಿಟರ್ ಖಾತೆಗೂ ಟ್ಯಾಗ್ ಮಾಡಲಾಗಿದೆ.
ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಥಾಣೆ ನಗರ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಮ್ಮ ಫೋನ್ ನಂಬರ್ ಅನ್ನು ಹಂಚಿಕೊಳ್ಳಿ ಎಂದು ಕೇಳಿದ್ದಾರೆ. ಇದಕ್ಕೆ ಟ್ವಿಟರ್ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು, ಏನು ಸಮಸ್ಯೆ ಸರ್? ಎಂದು ಪ್ರಶ್ನಿಸಿದ್ದಾರೆ. ಬಳಿಕ ಥಾಣೆ ಪೊಲೀಸರು 9969365100 ಫೋನ್ ನಂಬರ್ ಬರೆದು ಕರೆ ಮಾಡಲು ತಿಳಿಸಿದರು.
ಸದ್ಯ ಫೋಟೋ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಟ್ವೀಟ್ ಅನ್ನು ಈವರೆಗೆ ಡಿಲೀಟ್ ಮಾಡಿಲ್ಲ. ಸುಮಾರು 3,300 ಕ್ಕೂ ಹೆಚ್ಚು ಲೈಕ್‌ಗಳನ್ನು ಟ್ವೀಟ್ ಗಳಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಟ್ವೀಟ್ ಮಾಡಿದವನನ್ನು ತರಾಟೆಗೆ ತೆಗೆದುಕೊಂಡರೆ, ಇನ್ನು ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಳ್ಳುಬೇಕೆಂದು ಟ್ವಿಟ್ಟಿಗನ ಪರ ಬ್ಯಾಟ್ ಬೀಸಿದ್ದಾರೆ.
ಥಾಣೆ ಜಿಲ್ಲೆಯ ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಿಎಂ ಏಕನಾಥ್ ಶಿಂಧೆ ಅವರ ತವರು ಥಾಣೆ ಎಂಬುದನ್ನು ಗಮನಿಸಬಹುದು. ಹೀಗಾಗಿ ಥಾಣೆ ಪೊಲೀಸರು ಈ ಟ್ವೀಟ್ ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಆದಿಪುರುಷ್ ಸಿನಿಮಾ ರಾಮಾಯಣ ಆಧಾರಿತ ಸಿನಿಮಾ ಆಗಿದೆ. ಪ್ರಭಾಸ್ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾವನ್ನು ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್)