ನ್ಯೂಸ್

ಟ್ವಿಟರ್​ ವಲಯದಲ್ಲಿ ಮತ್ತೆ ಸಂಚಲನ; ಕಾರಣ ಎಲಾನ್​ ಮಸ್ಕ್​ ಟ್ವೀಟ್​..

ನವದೆಹಲಿ: ಟ್ವಿಟರ್ ವಲಯದಲ್ಲಿ ಭಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಟ್ವಿಟರ್​ ಡೀಲ್​ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮತ್ತೊಂದು ಸಂಚಲನ ಮೂಡಿದೆ.

ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ 44 ಬಿಲಿಯನ್ ಡಾಲರ್​ ಕೊಟ್ಟು ಟ್ವಿಟರ್ ಕಂಪನಿಯನ್ನು ಖರೀದಿಸುವ ವಿಚಾರ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದು, ಇದೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯವು ಲಕ್ಷಣಗಳು ಕಾಣಿಸಿವೆ. ಅಷ್ಟಕ್ಕೂ ಖುದ್ದು ಎಲಾನ್​ ಮಸ್ಕ್​ ಮಾಡಿರುವ ಟ್ವೀಟ್​ ಈಗ ಎಲ್ಲ ಉಲ್ಟಾ ಆಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ.

ಟ್ವಿಟರ್​ ಡೀಲ್​ ತಾತ್ಕಾಲಿಕವಾಗಿ ಪೆಂಡಿಂಗ್​ನಲ್ಲಿ ಇರಲಿದೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರ ಪೈಕಿ ಫೇಕ್​ ಅಕೌಂಟ್​ಗಳ ಸಂಖ್ಯೆ ಶೇ. 5ಕ್ಕಿಂತ ಕಡಿಮೆ ಇರಬೇಕಾಗಿದ್ದು, ಆ ಕುರಿತ ಲೆಕ್ಕಾಚಾರ ಬಾಕಿ ಇರುವುದರಿಂದ ಖರೀದಿ ಪ್ರಕ್ರಿಯೆಯನ್ನು ಸ್ಥಗಿತದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎಲಾನ್ ಹೀಗೆ ಹೇಳಿದ ಬಳಿಕ ಟ್ವಿಟರ್ ಷೇರುಗಳಲ್ಲಿ ಶೇ. 20 ಕುಸಿತ ಕಂಡಿದೆ ಎನ್ನಲಾಗಿದೆ. ಅದಾಗ್ಯೂ ಎಲಾನ್​ ಮಸ್ಕ್ ತಮಾಷೆಗೆ ಹೀಗೆ ಹೇಳಿರಬಹುದಾ ಅಥವಾ ನಿಜವಾಗಿಯೂ ಖರೀದಿ ಕುರಿತು ಎರಡನೇ ಯೋಚನೆ ಮಾಡುತ್ತಿದ್ದಾರಾ ಎಂಬುದು ಇನ್ನೂ ಖಚಿತವಾಗಿಲ್ಲ. ಅಂದಹಾಗೆ ಎಲನ್​ ಮಸ್ಕ್​ ಡೀಲ್​ಗೆ ಟ್ವಿಟರ್​ ಕಂಪನಿ ಒಪ್ಪಿದ್ದರೂ ಅದಿನ್ನೂ ಷೇರುದಾರರ ಮಾನ್ಯತೆ ಪಡೆಯವುದು ಬಾಕಿ ಇದೆ. ಒಟ್ಟಿನಲ್ಲಿ ಸದ್ಯ ಟ್ವಿಟರ್ ಡೀಲ್​ನಲ್ಲಿ ಅಸ್ಪಷ್ಟತೆ ಉಂಟಾಗಿದೆ.