ನ್ಯೂಸ್

ಗೃಹ ಸಚಿವ ಅಮಿತ್​ ಷಾ ಪ್ರೊಫೈಲ್​ ಪೋಟೋ ತೆಗೆದುಹಾಕಿದ ಟ್ವಿಟರ್..!​

ನವದೆಹಲಿ: ಕಾಪಿ ರೈಟ್​ ಉಲ್ಲಂಘನೆಯಾಗಿದೆ ಎಂದು ಗೃಹ ಸಚಿವ ಅಮಿತ್​ ಷಾ ಅವರ ಟ್ವಿಟರ್​ ಪ್ರೊಫೈಲ್​ ಫೋಟೋ ತೆಗೆದು ಹಾಕಿ, ಕೆಲ ಸಮಯದ ಬಳಿಕ ಮರುಸ್ಥಾಪನೆ ಆಗಿರುವುದಾಗಿ ಶುಕ್ರವಾರ ವರದಿಯಾಗಿದೆ.

ಗುರುವಾರ ತಡರಾತ್ರಿ ಕೆಲ ಸಮಯದವರೆಗೆ ಅಮಿತ್​ ಷಾ ಅವರ ಟ್ವಿಟರ್​ ಪ್ರೊಫೈಲ್ ದಿಢೀರ್​​ ಕಾಣೆಯಾಗಿತ್ತು. ಕಾಪಿ ರೈಟ್​ ಉಲ್ಲಂಘನೆಯಾಗಿದೆ ಎಂದು ಪ್ರೊಫೈಲ್​​ನಲ್ಲೇ ಸೂಚನೆ ನೀಡಲಾಗಿತ್ತು. ಕಾಪಿ ರೈಟ್​ ಮಾಲೀಕ ವರದಿ ಮಾಡಿದ್ದರಿಂದ ತಾತ್ಕಾಲಿಕವಾಗಿ ತಡೆಹಿಡಿದಿದ್ದ ಟ್ವಿಟರ್​ ಪ್ರೊಫೈಲ್​ ಅನ್ನು ಕೆಲ ಸಮಯದ ಬಳಿಕ ಮರುಸ್ಥಾಪಿಸಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್​, ನಮ್ಮ ಜಾಗತಿಕ ನಿಯಮಗಳಿಗೆ ಅನುಸಾರವಾಗಿ ಟ್ವಿಟರ್​ ಖಾತೆಯಲ್ಲಿ ಅಜಾಗರೂಕ ದೋಷಗಳು ಕಂಡುಬಂದಿರುವುದರಿಂದ ಈ ಖಾತೆಯ ಪ್ರೊಫೈಲ್​​ ಅನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿತ್ತು. ಆದಷ್ಟು ಬೇಗ ನಮ್ಮ ನಿರ್ಧಾರವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ಇದೀಗ ಟ್ವಿಟರ್​ ಖಾತೆ ಸಂಪೂರ್ಣ ಕಾರ್ಯ ನಿರ್ವಹಿಸುತ್ತಿದೆ ಎಂದು ಟ್ವಿಟರ್​ ವಕ್ತಾರ ಮಾಹಿತಿ ನೀಡಿದ್ದಾರೆ.

ಟ್ವಿಟರ್​ನ ಕಾಪಿ ರೈಟ್​ ಮಾನದಂಡಗಳ ಪ್ರಕಾರ, ಛಾಯಗ್ರಾಹಕನು ಚಿತ್ರದ ಮೇಲೆ ತನ್ನ ಹಕ್ಕುಸ್ವಾಮ್ಯವನ್ನು ಹೊಂದಿದ್ದಾನೆ ಹೊರತು ವಿಷಯದ ಮೇಲೆ ಅಲ್ಲ. ಚಿತ್ರದ ಬಗ್ಗೆ ತಕ್ಷಣ ಕೆಲ ಪ್ರತಿಕ್ರಿಯೆಗಳು ಬಂದಿದ್ದರಿಂದ ಅದನ್ನು ತೆಗೆದುಹಾಕಲಾಯಿತು ಎಂದು ಟ್ವಿಟರ್​ ಹೇಳಿದೆ.

ಅಂದಹಾಗೆ ಅಮಿತ್​ ಷಾ ಅವರು ಟ್ವಿಟರ್​ನಲ್ಲಿ 23 ಮಿಲಿಯನ್ಸ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಷಾ ಅವರು ಟ್ವಿಟರ್​ನಲ್ಲಿ 296 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. (ಏಜೆನ್ಸೀಸ್​)