(ಮುಂದುವರಿದ ಭಾಗ..)
ಯಾವುದೇ ಒಂದು ಸ್ತನಿಯಲ್ಲಿ ಹುಟ್ಟುವ ಮರಿ ಗಂಡು ಅಥವಾ ಹೆಣ್ಣು ಎನ್ನುವುದು ಅವುಗಳ ವರ್ಣತಂತುಗಳಿಂದ (ಕ್ರೋಮೋಸೋಮ್ಸ್) ಗರ್ಭದಲ್ಲಿಯೇ ನಿರ್ಧಾರವಾಗುತ್ತದೆ. ಆದರೆ, ಬಹುತೇಕ ಸರೀಸೃಪಗಳ ಅಂಡಾಣು ಅಥವಾ ವೀರ್ಯಾಣುಗಳಲ್ಲಿ ವರ್ಣತಂತುಗಳು ಇರುವುದಿಲ್ಲ. ಆದರೆ, ಆಮೆಗಳಲ್ಲಿ ವರ್ಣತಂತುಗಳು ಇರುವ ಮತ್ತು ಇಲ್ಲದೇ ಇರುವ ಪ್ರತ್ಯೇಕ ಆಮೆಗಳಿವೆ.
ಸಮುದ್ರದ ಕಡಲಿನಲ್ಲಿ ಮೊಟ್ಟೆಯಿಟ್ಟ ಕಡಲಾಮೆಗಳು ಗೂಡನ್ನು ಮರಳಿನಿಂದ ಮುಚ್ಚಿದ ನಂತರ ಆ ಗೂಡಿನಲ್ಲಿ ಉದ್ಭವವಾಗುವ ಉಷ್ಣಾಂಶವು, ಹುಟ್ಟುವ ಮರಿ ಗಂಡೋ ಅಥವ ಹೆಣ್ಣೋ ಎಂದು ನಿರ್ಧರಿಸುತ್ತದೆ. ಅಂದಾಜು 300 ಡಿ.ಸೆ.ಗೂ ಹೆಚ್ಚು ಉಷ್ಣಾಂಶವಿದ್ದರೆ ಹೆಣ್ಣು ಮರಿಗಳು, 300ಡಿ.ಸೆ.ಗೂ ಕಡಿಮೆ ಉಷ್ಣಾಂಶವಿದ್ದರೆ ಗಂಡು ಮರಿಗಳು ಹುಟ್ಟುತ್ತವೆ. ಆದರೆ, ಅಲ್ಲಿನ ಉಷ್ಣಾಂಶವು ಅಂದಿನ ಬಿಸಿಲಿನ ತಾಪ, ಮಳೆಯ ಪ್ರಮಾಣ, ಗಾಳಿ ಬೀಸುವುದು, ಮರಳಿನ ರೀತಿ, ಮೋಡದ ನೆರಳು, ಮರಗಳ ನೆರಳು ಹೀಗೆ ಹಲವು ಕಾರಣಗಳಿಂದ ವ್ಯತ್ಯಾಸವಾಗುತ್ತದೆ. ಆದ್ದರಿಂದ ಕೆಲವು ಉಪಜಾತಿಗಳಲ್ಲಿ ಗಂಡು ಹೆಚ್ಚಿರುತ್ತವೆ, ಕೆಲವು ಜಾತಿಗಳಲ್ಲಿ ಹೆಣ್ಣು ಜಾಸ್ತಿಯಿರುತ್ತವೆ. ಆದರೆ, ಸರಾಸರಿಯಾಗಿ ಲಿಂಗ ಸಮಾನತೆಯಿರುತ್ತದೆ.