ಕೊವಿಡ್-19 ಶುರುವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಂತೂ ಯಾವ್ಯಾವುದೋ ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿವೆ. ಕೊವಿಡ್-19 ಸೋಂಕಿತರ ಶವಗಳನ್ನು ಸಂಸ್ಕಾರ ಮಾಡುವ, ಎಲ್ಲೆಂದರಲ್ಲಿ ಬಿಸಾಕುವ ವಿಡಿಯೋಗಳಂತೂ ಸಾಲುಸಾಲುಗಳಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಮಧ್ಯ ಒಂದಷ್ಟು ಫೋಟೋಗಳು ವೈರಲ್ ಆಗಿದ್ದವು. ಪಟನಾ ಬಳಿ ಗಂಗಾನದಿಯಲ್ಲಿ ಕೊವಿಡ್-19 ನಿಂದ ಮೃತಪಟ್ಟವರ ಶವಗಳನ್ನು ಎಸೆಯಲಾಗುತ್ತಿದೆ ಎಂಬ ಕ್ಯಾಪ್ಷನ್ನೊಂದಿಗೆ ಫೋಟೋಗಳು ವೈರಲ್ ಆಗಿ ತೀವ್ರ ಆತಂಕ ಮೂಡಿಸಿದ್ದವು.
ದೋಣಿಯೊಂದರಲ್ಲಿ ಇಬ್ಬರು ಪುರುಷರು ನದಿ ಮಧ್ಯ ಹೋಗಿ, ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಸುತ್ತಿರುವ ಏನನ್ನೋ ನದಿಗೆ ಎಸೆಯುವುದನ್ನು ಫೋಟೋದಲ್ಲಿ ನೋಡಬಹುದು. ಇದನ್ನೂ ಓದಿ: ದುಬೆ ಎನ್ಕೌಂಟರ್ ಮಾಡಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಬೆನ್ನಲ್ಲೇ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ ಉಮಾಭಾರತಿ
ಆ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಫೇಸ್ಬುಕ್ ಬಳಕೆದಾರರು, ಕೊವಿಡ್-19ನಿಂದ ಮೃತಪಟ್ಟವರ ಶವಗಳನ್ನು ಪಟನಾ ಬಳಿ ಗಂಗಾನದಿಗೆ ಎಸೆಯುತ್ತಿರುವ ಫೋಟೋಗಳು ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಬಿಜಾರದಲ್ಲಿರುವ ಬಿಜೆಪಿ-ಜೆಡಿಯು ಸರ್ಕಾರ ಇದನ್ನು ಗಮನಿಸುತ್ತಿಲ್ಲ ಎಂದು ಕ್ಯಾಪ್ಷನ್ ಬರೆದಿದ್ದರು.
ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಫ್ಯಾಕ್ಟ್ಚೆಕ್ ನಡೆಸಿದೆ.
ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಕಾಂಗ್ರೆಸ್ ಬಿಹಾರ ಘಟಕದ ಅಧ್ಯಕ್ಷ ಮದನ್ ಮೋಹನ್ ಝಾ ಎಂಬುದು ಫ್ಯಾಕ್ಟ್ಚೆಕ್ ವೇಳೆ ಗೊತ್ತಾಗಿದೆ.
ಫೋಟೋಗಳ ಜಾಡು ಹಿಡಿದು ಹೊರಟಾಗ ಅದು ರಾಷ್ಟ್ರೀಯ ಮಾಧ್ಯಮವೊಂದರ ಪಟನಾ ಎಡಿಶನ್ನಲ್ಲಿ ಜು.8ರಂದು ಪ್ರಕಟವಾಗಿದ್ದು ಬೆಳಕಿಗೆ ಬಂತು. ಇದು ಕಾಳಿ ಘಾಟ್ ಬಳಿ ಇರುವ ಪಟನಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ (ಪಿಎಂಸಿಎಚ್) ಹಿಂಭಾಗದಲ್ಲಿ ತೆಗೆದ ಫೋಟೋ ಎಂದು ಆ ಮಾಧ್ಯಮದಲ್ಲಿ ಬರೆಯಲಾಗಿತ್ತು. ಅಲ್ಲದೆ, ಅಪರಿಚಿತ ಶವವೊಂದನ್ನು ಗಂಗಾನದಿಯಲ್ಲಿ ಎಸೆಯುತ್ತಿರುವ ಫೋಟೋ ಎಂದೂ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಕನ್ಯೆಯರ ರಕ್ತವೇ ಬೇಕಾಗಿತ್ತು ಈಕೆಯ ಸ್ನಾನಕ್ಕೆ…; 600 ಹುಡುಗಿಯರನ್ನು ಕೊಂದವಳು ಕಂಡಿದ್ದು ದುರಂತ ಅಂತ್ಯ
ನಂತರ ಫೋಟೋ ತೆಗೆದ ಫೋಟೋಗ್ರಾಫರ್ನನ್ನು ಸಂಪರ್ಕಿಸಿದ ಇಂಡಿಯಾ ಟುಡೆ AFWA ಸಮಗ್ರ ಮಾಹಿತಿ ಕಲೆ ಹಾಕಿದೆ.
ಇದು ಮಳೆಗಾಲ ಆಗಿದ್ದರಿಂದ ಕಾಳಿ ಘಾಟ್ಗೆ ಹೋಗಿ ಒಂದಷ್ಟು ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದೆ. ಈ ವೇಳೆ ಮೂವರು ದೋಣಿಯಲ್ಲಿ ಆಗಮಿಸಿ ಒಂದು ಶವವನ್ನು ಬಟ್ಟೆಯಲ್ಲಿ ಸುತ್ತಿ ಎಸೆದರು. ಆದರೆ ಇದು ಕೊವಿಡ್-19 ನಿಂದ ಮೃತಪಟ್ಟವರ ಶವ ಎಂಬುದರ ಬಗ್ಗೆ ಗ್ಯಾರಂಟಿ ಇಲ್ಲ. ಅಲ್ಲಿ ಕೇವಲ ಒಂದು ಶವ ಅಷ್ಟೇ ಇತ್ತು. ತುಂಬ ಹೆಣಗಳು ಇರಲಿಲ್ಲ ಎಂದೂ ಫೋಟೋಗ್ರಾಫರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಅಲ್ಲಿಯೇ ಇದ್ದ ಪಿಎಂಸಿಎಚ್ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬುದೂ ಫ್ಯಾಕ್ಟ್ಚೆಕ್ ವೇಳೆ ಗೊತ್ತಾಗಿದೆ. ಹಾಗಾಗಿ, ನದಿಯಲ್ಲಿ ಬಿಟ್ಟ ಶವ ಕೊವಿಡ್-19 ರೋಗಿಯದ್ದು ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಸ್ಪಷ್ಟವಾಗಿದೆ. (ಏಜೆನ್ಸೀಸ್)
ವೈರಲ್ ಆಗಿರುವ ಪೋಸ್ಟ್..