ನ್ಯೂಸ್

ಶೇ.25ರಷ್ಟು ಸುಂಕ! ಆ್ಯಪಲ್​ಗೆ ಮತ್ತೊಮ್ಮೆ ಟ್ರಂಪ್​ ಆಘಾತ; ಸಂಸ್ಥೆಯ ಷೇರುಗಳ ಮೇಲೂ ಹೊಡೆತ | Trump Tariffs

Trump Tariffs: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅದ್ಯಾಕೋ ಆ್ಯಪಲ್​ ಸಂಸ್ಥೆ ಮೇಲೆ ಸಿಡಿಮಿಡಿಗೊಂಡಿರುವುದು ಇದೀಗ ಸ್ಪಷ್ಟವಾಗಿದೆ. ಐಫೋನ್‌ಗಳ ತಯಾರಿಕೆಯ ಬಗ್ಗೆ ಟ್ರಂಪ್ ಮತ್ತೊಮ್ಮೆ ಆ್ಯಪಲ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಇಲ್ಲಿಯೇ ತಯಾರಿಸಬೇಕೇ ವಿನಃ ಇನ್ಯಾವುದೇ ದೇಶದಲ್ಲಿ ಅಥವಾ ಸ್ಥಳದಲ್ಲಿ ಅಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ದೊಡ್ಡ ಪೆಟ್ಟು

​ಭಾರತ ಅಥವಾ ಇತರೆ ಯಾವುದೇ ದೇಶದಲ್ಲಿ ತಯಾರಿಸಬಾರದು ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಅಥವಾ ಬೇರೆ ಯಾವುದೇ ದೇಶದಲ್ಲಿ ಐಫೋನ್‌ಗಳನ್ನು ತಯಾರಿಸಿದರೆ, ಅವರು ಕನಿಷ್ಠ ಅಂದರೆ ಶೇ.25ರಷ್ಟು ಸುಂಕ ಪಾವತಿಸಬೇಕು ಎಂದು ಟ್ರಂಪ್ ಆ್ಯಪಲ್ ಸಿಇಒ ಟಿಮ್ ಕುಕ್‌ಗೆ ಎಚ್ಚರಿಕೆ ರವಾನಿಸಿದ್ದಾರೆ. ಇದು ಆ್ಯಪಲ್​ಗೆ ಶಾಕ್​ ಜೊತೆಗೆ ಮಾರಾಟ ವಹಿವಾಟಿಗೂ ದೊಡ್ಡ ಪೆಟ್ಟು ನೀಡಿದಂತಾಗಿದೆ.

"ಯುಎಸ್‌ನಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲಿಯೇ ತಯಾರಿಸಬೇಕು ಎಂದು ನಾನು ಈಗಾಗಲೇ ಟಿಮ್ ಕುಕ್‌ಗೆ ಹೇಳಿದ್ದೇನೆ. ಭಾರತದಲ್ಲಿ ಅಥವಾ ಬೇರೆ ಯಾವುದೇ ದೇಶದಲ್ಲಿ ಅಲ್ಲ. ನುಡಿದಂತೆ ನಡೆಯದಿದ್ದರೆ, ಆ್ಯಪಲ್ ಸಂಸ್ಥೆ ಶೇ.25ರಷ್ಟು ಸುಂಕವನ್ನು ನಮಗೆ ಪಾವತಿಸುವುದು ಅನಿವಾರ್ಯ" ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್​ನ ಈ ಎಚ್ಚರಿಕೆಯಿಂದ ಆ್ಯಪಲ್ ಷೇರುಗಳ ಮೇಲೆ ದೊಡ್ಡ ಪರಿಣಾಮ ಬೀರಿವೆ. ಅದರ ಷೇರು ಬೆಲೆ ಶೇ.3ರಷ್ಟು ಕುಸಿದಿದೆ.

ಫಾಕ್ಸ್‌ಕಾನ್ ಟೆಕ್ನಾಲಜಿ

ಚೀನಾ ಮೇಲಿನ ಯುಎಸ್ ಸುಂಕಗಳೊಂದಿಗೆ ಆ್ಯಪಲ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ಐಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಸಂಸ್ಥೆ ಈಗಾಗಲೇ ಘೋಷಿಸಿದೆ. ಇತ್ತೀಚೆಗೆ ಈ ವಿಸ್ತರಣಾ ಪ್ರಕ್ರಿಯೆಗೆ ಪ್ರತಿಕ್ರಿಯಿಸಿದ ಟ್ರಂಪ್, ಆ್ಯಪಲ್‌ಗೆ ತನ್ನ ನಿರ್ಧಾರವನ್ನು ಇಲ್ಲಿಗೆ ಕೈಬಿಡುವಂತೆ ಸಲಹೆ ನೀಡಿರುವುದು ಅಚ್ಚರಿಯ ಬೆಳವಣಿಗೆ. ಸಂಸ್ಥೆ ಭಾರತದಲ್ಲಿ ಬೃಹತ್ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ತನಗೆ ಕಿಂಚಿತ್ತು ಇಷ್ಟವಿಲ್ಲ ಎಂಬುದನ್ನು ಇದೀಗ ಟ್ರಂಪ್​ ಪರೋಕ್ಷವಾಗಿ ತಿಳಿಸಿದ್ದಾರೆ.

ಭಾರತದಲ್ಲಿ ತಯಾರಾಗುವ ಬಹುತೇಕ ಐಫೋನ್‌ಗಳನ್ನು ದಕ್ಷಿಣ ಭಾರತದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಕಾರ್ಖಾನೆಗಳಲ್ಲಿ ಜೋಡಿಸಲಾಗುತ್ತದೆ. ಟಾಟಾ ಗ್ರೂಪ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಿಭಾಗವು ಸಹ ಇದರ ಪ್ರಮುಖ ಪೂರೈಕೆದಾರ. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಟಾಟಾ ಮತ್ತು ಫಾಕ್ಸ್‌ಕಾನ್ ದಕ್ಷಿಣ ಭಾರತದಲ್ಲಿ ಹೊಸ ಸ್ಥಾವರಗಳನ್ನು ನಿರ್ಮಿಸುತ್ತಿವೆ ಎಂದು ಬ್ಲೂಮ್‌ಬರ್ಗ್ ವರದಿ ಉಲ್ಲೇಖಿಸಿದೆ. ಮಾರ್ಚ್‌ವರೆಗಿನ 12 ತಿಂಗಳಲ್ಲಿ ಆ್ಯಪಲ್ ಭಾರತದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಜೋಡಿಸಿದೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು ಶೇ.60ರಷ್ಟು ಉತ್ಪಾದನೆಯ ಹೆಚ್ಚಳ ಎಂಬುದು ಗಮನಾರ್ಹ,(ಏಜೆನ್ಸೀಸ್).