ನ್ಯೂಸ್

ಅಮೆರಿಕ-ಚೀನಾ ನಡುವಿನ ಸುಂಕ ಸಮರಕ್ಕಿಲ್ಲ ಅಂತ್ಯ!? ಚೀನಾಗೆ ಮತ್ತೊಂದು ಶಾಕ್​ ನೀಡಿದ ಟ್ರಂಪ್ ಸರ್ಕಾರ​ | Trump

Trump Tariffs: ಪ್ರಸ್ತುತ 90 ದಿನಗಳ ಸುಂಕ ವಿರಾಮ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್​, ಚೀನಾ ದೇಶವನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೂ ಸುಂಕ ವಿರಾಮ ನೀಡಿದ್ದಾರೆ. ವಿಶ್ವದ ದೊಡ್ಡಣ್ಣನ ಈ ಕಟು ನಿರ್ಧಾರ ಇದೀಗ ಯುಎಸ್-ಚೀನಾ ವ್ಯಾಪಾರ ಯುದ್ಧಕ್ಕೆ ಚಾಲನೆ ನೀಡಿದಂತಾಗಿದೆ.

ಅಂತ್ಯಕಾಣದ ಸುಂಕ ಸಮರ

ಚೀನಾ ವಿರುದ್ಧ ಅಮೆರಿಕ ಜಿದ್ದು ಸಾಧಿಸುತ್ತಿದ್ದರೆ, ಅತ್ತ ಚೀನಾ ಕೂಡ ಯುಎಸ್​ ಅಧ್ಯಕ್ಷನ ನಡೆಗೆ ಭಾರೀ ಖಂಡನೆ ವ್ಯಕ್ತಪಡಿಸಿದೆ. ಈ ಮೂಲಕ ಎರಡು ದೇಶಗಳ ನಡುವೆ ಸುಂಕ ಯುದ್ಧ ತಾರಕಕ್ಕೇರಿದೆ. ಟ್ರಂಪ್ ಪ್ರಾರಂಭಿಸಿದ ಪ್ರತೀಕಾರದ ಸುಂಕ ಯುದ್ಧಕ್ಕೆ ಚೀನಾ ಹಂತ ಹಂತವಾಗಿ ಖಡಕ್​ ಪ್ರತಿಕ್ರಿಯೆ ನೀಡುತ್ತಿದೆ. ಅಮೆರಿಕ ಚೀನಾದ ಆಮದುಗಳ ಮೇಲೆ ಪ್ರತೀಕಾರದ ಸುಂಕಗಳನ್ನು ಹೆಚ್ಚಿಸುತ್ತಿದ್ದರೆ, ಚೀನಾ ಕೂಡ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಪ್ರತೀಕಾರದ ಸುಂಕಗಳನ್ನು ದುಬಾರಿಗೊಳಿಸುತ್ತಿದೆ.

ಇದೆಲ್ಲದರ ಮಧ್ಯೆ ಇದೀಗ ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತೊಂದು ಕಟು ನಿರ್ಧಾರ ತೆಗೆದುಕೊಂಡಿದ್ದು, ಚೀನಾದ ಆಮದುಗಳ ಮೇಲೆ 245 ಪ್ರತಿಶತದವರೆಗೆ ಹೊಸ ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದೆ. ಈ ವಿಚಾರವನ್ನು ಅಮೆರಿಕಾದ ಶ್ವೇತಭವನ ದೃಢಪಡಿಸಿದೆ. ಟ್ರಂಪ್ ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿದ್ದರು. ಈ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕಂಪನ ಶುರುವಾಗಿತ್ತು. ಈ ಬೆಳವಣಿಗೆಯಿಂದ ಹಲವು ರಾಷ್ಟ್ರಗಳು ಭಾರೀ ನಷ್ಟವನ್ನು ಎದುರಿಸಿತು. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಟ್ರಂಪ್​, ತಕ್ಷಣವೇ ಜಾರಿಗೆ ಬರುವಂತೆ ಚೀನಾ ಹೊರತುಪಡಿಸಿ ಉಳಿದ ರಾಷ್ಟ್ರಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದರು.

125ರಿಂದ 245

ತನ್ನ ದೇಶಕ್ಕೆ ವಿಧಿಸಲಾದ ಹೆಚ್ಚುವರಿ ಸುಂಕ ಕಂಡ ಕೆಂಡಾಮಂಡಲಗೊಂಡಿರುವ ಚೀನಾ, ಟ್ರಂಪ್ ನಿರ್ಧಾರಕ್ಕೆ ಭಾರೀ ಅಸಮಾಧಾನ ಹೊಂದಿದೆ. ಇದನ್ನು ತೀವ್ರವಾಗಿಯೂ ವಿರೋಧಿಸಿದೆ. ಪ್ರಸ್ತುತ ಈ ಎರಡು ದೇಶಗಳ ನಡುವೆ ಜಿದ್ದಾಜಿದ್ದಿನಲ್ಲಿ ಪ್ರತೀಕಾರದ ಸುಂಕಗಳು ದಿನದಿಂದ ದಿನಕ್ಕೆ ಮತ್ತಷ್ಟು ಏರಿಕೆಯಾಗುತ್ತಿವೆ. ಎರಡೂ ದೇಶಗಳು ಸ್ಪರ್ಧಾತ್ಮಕ ರೀತಿಯಲ್ಲಿ ತಮ್ಮ ಪ್ರತೀಕಾರದ ಸುಂಕಗಳನ್ನು ಹೆಚ್ಚಿಸುತ್ತಲೇ ಬಂದಿವೆ. ಟ್ರಂಪ್ ಚೀನಾದ ಸರಕುಗಳ ಮೇಲೆ ಶೇ.145ರಷ್ಟು ಸುಂಕವನ್ನು ವಿಧಿಸಿದರೆ, ಡ್ರ್ಯಾಗನ್ ದೇಶ ಸೂಪರ್ ಪವರ್ ಸರಕುಗಳ ಮೇಲೆ ಶೇ.125 ರಷ್ಟು ಸುಂಕ ವಿಧಿಸಿದೆ. ಇದರೊಂದಿಗೆ, ಎರಡೂ ದೇಶಗಳ ನಡುವಿನ ವ್ಯಾಪಾರ ಯುದ್ಧ ತೀವ್ರಗೊಂಡಿದೆ.

ಚೀನಾ ತನ್ನ ದೇಶದ ಅಪರೂಪದ ಖನಿಜಗಳು, ಪ್ರಮುಖ ಲೋಹಗಳು ಮತ್ತು ಆಯಸ್ಕಾಂತ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಮೆರಿಕಾಗೆ ರಫ್ತು ಮಾಡುವುದನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ನಿರ್ಧಾರದಿಂದ ಅಮೆರಿಕದ ರಕ್ಷಣಾ ಇಲಾಖೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದು ಯುಎಸ್​ನ ಫೈಟರ್ ಜೆಟ್‌ಗಳ ತಯಾರಿಕೆ ಇತ್ಯಾದಿಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ವಿಶ್ವಾದ್ಯಂತ ಉತ್ಪಾದಿಸುವ ಒಟ್ಟು ಅಪರೂಪದ ಖನಿಜಗಳಲ್ಲಿ ಚೀನಾ ಶೇ.70ರಷ್ಟಿದೆ. ಅಮೆರಿಕದ ಪಾಲು ಕೇವಲ ಶೇ. 11.4ರಷ್ಟಿದೆ. ಇದಲ್ಲದೆ, ಚೀನಾ ದೇಶೀಯ ವಿಮಾನಯಾನ ಸಂಸ್ಥೆಗಳು ಅಮೆರಿಕದ ಏರೋಸ್ಪೇಸ್ ದೈತ್ಯ ಬೋಯಿಂಗ್‌ನಿಂದ ಯಾವುದೇ ವಿತರಣೆಗಳನ್ನು ಸ್ವೀಕರಿಸದಂತೆ ಆದೇಶಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.

ಸುಂಕ ಕದನಕ್ಕೆ ಕಿಡಿ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಡೊನಾಲ್ಡ್ ಟ್ರಂಪ್ ಚೀನಾಗೆ ಮತ್ತೊಂದು ಶಾಕ್ ನೀಡಿದ್ದು, ಚೀನಾದ ಸರಕುಗಳ ಮೇಲೆ ಈಗಾಗಲೇ ಶೇ. 145ರಷ್ಟು ವಿಧಿಸಿದ್ದ ಸುಂಕವನ್ನು ತೆಗೆದುಹಾಕಿ ಶೆ.245ರಷ್ಟು ಏರಿಸಿದೆ. ಟ್ರಂಪ್​ನ ಈ ನಿಲುವು ಚೀನಾಗೆ ಅತಿದೊಡ್ಡ ಸವಾಲು ಹಾಕಿದಂತಿದೆ. ಸುಂಕಗಳ ವಿಷಯದಲ್ಲಿ ಎರಡೂ ರಾಷ್ಟ್ರಗಳ ನಡುವೆ ಸುಂಕ ಸಮರ ಜೋರಾಗಿದ್ದು, ಈಗ ಚೀನಾ ನಿಲುವು ಏನು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ,(ಏಜೆನ್ಸೀಸ್).