ವಾಷಿಂಗ್ಟನ್: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಜತೆಗೆ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳು, ಸಂಶೋಧಕರ ಪ್ರವೇಶವನ್ನು ನಿಷೇಧಿಸುವ ಘೋಷಣೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದಾರೆ. ಪಿಎಲ್ಎ ತನ್ನ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳು, ಸಂಶೋಧಕರ ಮೂಲಕ ಅಮೆರಿಕದ ಟೆಕ್ನಾಲಜಿ ಮತ್ತು ಬೌದ್ಧಿಕ ಆಸ್ತಿಯನ್ನು ಕಳವುಗೈಯುತ್ತಿದೆ. ಚೀನಾದ ಈ ಪ್ರಯತ್ನವನ್ನು ತಡೆಯುವ ಸಲುವಾಗಿ ಈ ನಿಷೇಧ ಹೇರಲಾಗುತ್ತಿದೆ ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚೀನಾ ತನ್ನ ಸುತ್ತಲಿನ ಭೌಗೋಳಿಕ ವ್ಯಾಪ್ತಿಯಲ್ಲಿ ಗಡಿ ಅತಿಕ್ರಮಣಕ್ಕೆ ಆಕ್ರಮಣಕಾರಿ ಹೆಜ್ಜೆ ಇರಿಸುತ್ತಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ನಡೆಯನ್ನು ತೀವ್ರಗೊಳಿಸಿದೆ. ಇದೇ ರೀತಿ ಭಾರತ ಗಡಿಯಲ್ಲೂ ಚೀನಾ ಆಕ್ರಮಣಕಾರಿ ನಡೆಯನ್ನು ಪ್ರದರ್ಶಿಸಿದೆ. ಇನ್ನೊಂದೆಡೆ, ಹಾಂಕಾಂಗ್ ಮೇಲಿನ ಹಿಡಿತವನ್ನು ಬಿಗಿಗೊಳಿಸುವುದಕ್ಕೆ ಆಕ್ರಮಣಕಾರಿಯಾಗಿ ಬೀಜಿಂಗ್ ಮುನ್ನುಗ್ಗುತ್ತಿರುವಾಗಲೇ ಅಮೆರಿಕದ ಈ ಘೋಷಣೆ ಹೊರಬಿದ್ದಿದೆ.
ಇದನ್ನೂ ಓದಿ: ನನ್ನ ಸಂಕಲ್ಪ ಶಕ್ತಿಯ ಮೂಲವೇ ನೀವು…!
ಚೀನಾ ತನ್ನ ಪಿಎಲ್ಎಯ ಆಧುನೀಕರಣಕ್ಕೆ ಮುಂದಾಗಿದ್ದು, ಇದಕ್ಕಾಗಿ ಅಮೆರಿಕದ ಟೆಕ್ನಾಲಜಿ ಮತ್ತು ಬೌದ್ಧಿಕ ಆಸ್ತಿಯನ್ನು ಹೊಂದುವುದಕ್ಕೆ ಅಡ್ಡದಾರಿ ಹಿಡಿದಿದೆ. ಇದು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವುದು ಅಮೆರಿಕದ ಗಮನಕ್ಕೆ ಬಂದಿದೆ. ಚೀನಾದ ಈ ನಡೆ ಅಮೆರಿಕದ ಪಾಲಿಗೆ ಬೆದರಿಕೆಯಾಗಿದ್ದು, ಅಮೆರಿಕನ್ನರ ಸುರಕ್ಷತೆ ಮತ್ತು ಭದ್ರತೆಗೂ ಬೆದರಿಕೆಯೇ ಆಗಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಸ್ನಾತಕೋತ್ತರ ಮತ್ತು ಪೋಸ್ಟ್ ಡಾಕ್ಟೋರಲ್ ಸಂಶೋಧಕರಾಗಿರುವ ಚೀನೀ ವಿದ್ಯಾರ್ಥಿಗಳನ್ನು ಪಿಎಲ್ಎ ಈ ಕೆಲಸಕ್ಕಾಗಿ ವ್ಯಾಪಕವಾಗಿ ಬಳಸುತ್ತಿದೆ. ಇದು ಸಾಂಪ್ರದಾಯಿಕ ಕಳ್ಳತನಕ್ಕಿಂತ ವಿಭಿನ್ನವಾದ ಹೊಸ ಮಾದರಿಯ ಕಳ್ಳತನದ ಪ್ರಕ್ರಿಯೆಯಾಗಿದೆ. ಹೀಗಾಗಿ ಈಗ ಪಿಎಲ್ಎ ಜತೆಗೆ ಸಂಪರ್ಕದಲ್ಲಿರುವ ಚೀನೀ ವಿದ್ಯಾರ್ಥಿಗಳು, ಸಂಶೋಧಕರಿಗೆ ಅತ್ಯಂತ ಅಪಾಯಕಾರಿ ಸನ್ನಿವೇಶ ಇದೆ. ಇದೇ ಕಾರಣಕ್ಕೆ ಅಂಥ ವಿದ್ಯಾರ್ಥಿಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಟ್ರಂಪ್ ವಿವರಿಸಿದ್ದಾರೆ.
ಇದನ್ನೂ ಓದಿ: ಸಾಧನೆಗಳ ಅಮೋಘವರ್ಷ: ನಮೋ ಪರ್ವ 2.0
ಇದಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಪ್ರತಿಕ್ರಿಯಿಸಿದ್ದು, ಅಮೆರಿಕದಲ್ಲಿರುವ ಚೀನೀ ವಿದ್ಯಾರ್ಥಿಗಳ ಕಾನೂನು ಬದ್ಧ ಅಧಿಕಾರಗಳನ್ನು ಮೊಟಕುಗೊಳಿಸುವಂತಿಲ್ಲ. ಅದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)