ನ್ಯೂಸ್

ಟ್ರ್ಯಾಕ್ಟರ್ ಸ್ಟಂಟ್‌ ನಿಷೇಧಿಸಿದ ಪಂಜಾಬ್ ಸಿಎಂ ಭಗವಂತ್​ ಮಾನ್​!

ಪಂಜಾಬ್‌: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಜಾತ್ರೆಯೊಂದರಲ್ಲಿ ಸ್ಟಂಟ್​ ಮಾಡಲು ಹೋದ ವ್ಯಕ್ತಿಯೊಬ್ಬರು ಟ್ರ್ಯಾಕ್ಟರ್‌ನಡಿ ಸಿಲುಕಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಇದೀಗ ಪಂಜಾಬ್ ಸರ್ಕಾರವು ಯಾವುದೇ ರೀತಿಯ ಸ್ಟಂಟ್ ಅಥವಾ ಟ್ರ್ಯಾಕ್ಟರ್‌ನೊಂದಿಗೆ ಮಾಡುವ ಅಪಾಯಕಾರಿ ಪ್ರದರ್ಶನವನ್ನು ನಿಷೇಧಿಸಿದೆ.

ಈ ಕುರಿತಂತೆ ಎಕ್ಸ್​ನಲ್ಲಿ ಬರೆದ ಪಂಜಾಬ್ ಸಿಎಂ ಭಗವಂತ್ ಮಾನ್, “ಟ್ರ್ಯಾಕ್ಟರ್ ಅನ್ನು ಕ್ಷೇತ್ರಗಳ ರಾಜ ಎಂದು ಕರೆಯಲಾಗುತ್ತದೆ. ಅದನ್ನು ಸಾವಿನ ದೇವತೆಯನ್ನಾಗಿ ಮಾಡಬೇಡಿ. ಟ್ರಾಕ್ಟರ್ ಮತ್ತು ಸಂಬಂಧಿತ ಉಪಕರಣಗಳೊಂದಿಗೆ ಯಾವುದೇ ರೀತಿಯ ಸಾಹಸ ಅಥವಾ ಅಪಾಯಕಾರಿ ಪ್ರದರ್ಶನವನ್ನು ಪಂಜಾಬ್‌ನಲ್ಲಿ ನಿಷೇಧಿಸಲಾಗಿದೆ. ಶೀಘ್ರದಲ್ಲೇ ಹೆಚ್ಚಿನ ವಿವರಗಳು ತಿಳಿಸಲಿದ್ದೇವೆ" ಎಂದು ಪೋಸ್ಟ್​ ಮಾಡಿದ್ದಾರೆ.

ಘಟನೆಯ ವಿವರ: ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ಏರ್ಪಡಿಸಿದ್ದ ಜಾತ್ರೆಯಲ್ಲಿ ತನ್ನ ಟ್ರ್ಯಾಕ್ಟರ್ ಬಳಸಿಕೊಂಡು ಸಾಹಸ ಪ್ರದರ್ಶಿಸುತ್ತಿದ್ದ 29 ವರ್ಷದ ಸ್ಟಂಟ್‌ಮ್ಯಾನ್‌, ಆಯಾತಪ್ಪಿ ವಾಹನದ ಚಕ್ರದಡಿಗೆ ಸಿಲುಕಿ ಮೃತಪಟ್ಟರು.

ಘಟನೆಯಲ್ಲಿ ಮೃತಪಟ್ಟ ಸ್ಟಂಟ್‌ಮ್ಯಾನ್ ಅನ್ನು ಸುಖಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಜಾತ್ರೆಯಲ್ಲಿ ತಮ್ಮ ಟ್ರ್ಯಾಕ್ಟರ್​ ಬಳಸಿಕೊಂಡು ಮಾಡುತ್ತಿದ್ದ ಸಾಹಸ ಪ್ರದರ್ಶನದ ವೇಳೆ ಈ ದುರಂತ ಸಂಭವಿಸಿದೆ.

ಈ ದುರಂತ ಸಂಭವಿಸಿದ ಕೂಡಲೇ ಜಾತ್ರೆ ಆಯೋಜಿಸಿದ್ದ ಆಡಳಿತವು ಮೇಳವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು. ಫತೇಘರ್ ಚುರಿಯನ್ ನಿವಾಸಿಯಾದ ಸುಖಮನ್‌ದೀಪ್ ಸಿಂಗ್, ಅವರ ಪೋಷಕರ ಏಕೈಕ ಪುತ್ರನಾಗಿದ್ದು, ರೈತರ ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಘಟನೆಯಲ್ಲಿ ಸಾವಿಗೀಡಾದ ಸುಖಮನ್‌ದೀಪ್ ಅವರನ್ನು ನೆನೆದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).