ಬೀಜಿಂಗ್: ಆಕಸ್ಮಿಕವಾಗಿ ನದಿಗೆ ಬಿದ್ದ ಚೀನಾ ಪ್ರವಾಸಿಗರೊಬ್ಬರ ಮೊಬೈಲ್ ಬರೋಬ್ಬರಿ 8 ತಿಂಗಳ ಬಳಿಕ ಪವಾಡಸದೃಶ್ಯ ರೀತಿಯಲ್ಲಿ ಮತ್ತೆ ಪತ್ತೆಯಾಗಿದೆ. ಬಾಯಿ ಮೇಲೆ ಬೆರಳಿಡುವಂತಹ ಸಂಗತಿಯೆಂದರೆ ಈಗಲೂ ಸಹ ಮೊಬೈಲ್ ಮೊದಲಿನಂತೆಯೇ ಕಾರ್ಯ ನಿರ್ವಹಿಸುತ್ತಿದೆ.
ಮೊಬೈಲ್ ಮರಳಿ ಪಡೆದ ಅದೃಷ್ಟಶಾಲಿ ಪ್ರವಾಸಿಗನ ಹೆಸರು ಜೌ. ಈತ ಕಳೆದ ಸೆಪ್ಟೆಂಬರ್ನಲ್ಲಿ ಚೀನಾದ ನದಿಯಲ್ಲಿ ಸ್ನೇಹಿತನೊಂದಿಗೆ ಮೀನು ಹಿಡಿಯುವಾಗ ಆತನ ಸ್ಮಾರ್ಟ್ಫೋನ್ ನದಿಗೆ ಬಿದ್ದಿತ್ತು. ಆಳವಾದ ನದಿಗೆ ಬಿದ್ದ ಮೇಲೆ ಮೊಬೈಲ್ ಮತ್ತೆ ಮರಳಿ ಪಡೆಯಲು ಸಾಧ್ಯವಾ? ಅದು ಅಸಾಧ್ಯವೆಂದು ಆ ವಿಚಾರವನ್ನೇ ಜೌ ಮರೆತುಬಿಟ್ಟಿದ್ದ.
ಆದರೆ, ಇತ್ತೀಚೆಗೆ ಆತನಿಗೆ ಬಂದ ಫೋನ್ ಕಾಲ್ ದಂಗಾಗುವಂತೆ ಮಾಡಿತ್ತು. ಅದಕ್ಕೆ ಕಾರಣ ಮೀನುಗಾರನೊಬ್ಬ ಜೌಗೆ ಕರೆ ಮಾಡಿ ಮೊಬೈಲ್ ಸಿಕ್ಕಿರುವ ಬಗ್ಗೆ ತಿಳಿಸಿದ್ದ. ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಮೊಬೈಲ್ ಪತ್ತೆಯಾಗಿದ್ದಾಗಿ ಹಾಗೂ ಮೊಬೈಲ್ ಹಿಂಭಾಗದಲ್ಲಿದ್ದ ಬಿಸಿನೆಸ್ ಕಾರ್ಡ್ನಿಂದ ಲಭ್ಯವಾದ ನಂಬರ್ನಿಂದ ಕರೆ ಮಾಡಿದ್ದಾಗಿ ಮೀನುಗಾರ, ಜೌಗೆ ಮಾಹಿತಿ ನೀಡಿದ್ದ. ಇದನ್ನು ಕೇಳಿ ಜೌಗೆ ಅಕ್ಷರಶಃ ಅಚ್ಚರಿಯಾಗಿತ್ತು.
ಬಳಿಕ ಮೊಬೈಲ್ ಪಡೆಯಲು ಹೋದ ಜೌಗೆ ಮತ್ತಷ್ಟು ಸರ್ಪ್ರೈಸ್ ಕಾದಿತ್ತು. ಅರ್ಧ ವರ್ಷಕ್ಕಿಂತ ಹೆಚ್ಚು ಕಾಲ ನೀರಿನಲ್ಲಿದ್ದ ಮೊಬೈಲ್ಗೆ ಯಾವುದೇ ಹಾನಿ ಆಗಿರಲಿಲ್ಲ. ಅಲ್ಲದೆ, ಹಿಂದೆ ಹೇಗೆ ಕಾರ್ಯನಿರ್ವಹಿಸುತ್ತಿತ್ತೋ ಅದೇ ರೀತಿಯಾಗಿ ಮೊಬೈಲ್ ಜೀವಂತವಾಗಿಯೇ ಇತ್ತು.
ಮೊಬೈಲ್ ಪಡೆದ ಬಳಿಕ ತನ್ನ ಹಿಂದಿನ ಘಟನೆಯನ್ನು ಮತ್ತೊಮ್ಮೆ ಮೆಲುಕು ಹಾಕಿದ ಜೌ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನೈರುತ್ಯ ಚೀನಾದ ಗಿಜೌ ಪ್ರಾಂತ್ಯದ ಗುಯಿಯಾಂಗ್ನಲ್ಲಿರುವ ವು ಹೆಸರಿನ ನದಿಯಲ್ಲಿ ಸ್ನೇಹಿತನೊಂದಿಗೆ ಮೀನು ಹಿಡಿಯುವಾಗ ಪ್ಲಾಸ್ಟಿಕ್ ಬ್ಯಾಗ್ನಲ್ಲಿದ್ದ ಮೊಬೈಲ್ ಜೀಪ್ ಓಪನ್ ಆಗಿ ನೀರಿಗೆ ಬಿದ್ದಿದ್ದಾಗಿ ಮೀನುಗಾರನಿಗೆ ವಿವರಿಸಿದ. ಮರಳಿ ಪಡೆಯಲು ಸಾಧ್ಯವಿಲ್ಲವೆಂದು ಆ ವಿಚಾರ ಮರೆತಿದ್ದೆ. ಇದೀಗ ಅಚ್ಚರಿಯಾಗಿದೆ ಎಂದು ಹೇಳಿ ಮೊಬೈಲ್ ಮರಳಿ ನೀಡಿದ ಮೀನುಗಾರನಿಗೆ ಧನ್ಯವಾದ ತಿಳಿಸಿ ಮೊಬೈಲ್ ಪಡೆದು ಮನೆಗೆ ಹಿಂತಿರುಗಿದರು. (ಏಜೆನ್ಸೀಸ್)