ನವದೆಹಲಿ: ಕೇಂದ್ರ ಸರ್ಕಾರ ಚೀನಿ ಆ್ಯಪ್ಗಳನ್ನು ಅಧಿಕೃತವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ, ಮತ್ತೊಂದು ಹೊಡೆತ ನೀಡಲು ಭಾರತ ಸಜ್ಜಾಗಿದೆ.
ಚೀನಾದ 5ಜಿ ಉಪಕರಣಗಳನ್ನು ಕೂಡ ನಿರ್ಬಂಧಿಸಿ ಆದೇಶ ಹೊರಡಿಸಲು ಸಚಿವರ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 5ಜಿ ಅನುಷ್ಠಾನಗೊಳಿಸಲು ಚೀನಾದ ಹುವೈ ಹಾಗೂ ಇತರ ಕಂಪನಿಗಳು ವಿವಿಧ ಉಪಕರಣಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉಪಕರಣಗಳಿಗೆ ನಿರ್ಬಂಧ ವಿಧಿಸಲು ಚರ್ಚೆ ನಡೆಸಲಾಗಿದೆ.
ಸದ್ಯ ಭಾರತದಲ್ಲಿ 5ಜಿ ಅನುಷ್ಠಾನ ಕನಿಷ್ಠ ಒಂದು ವರ್ಷವಾದರೂ ವಿಳಂಬವಾಗಲಿದೆ. ಏಕೆಂದರೆ ಇನ್ನೂ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಯೇ ನಡೆದಿಲ್ಲ.
ಇದಲ್ಲದೇ, ಈ ತರಂಗಾಂತರಗಳನ್ನು ಖರೀದಿಸಲು ಪೈಪೋಟಿ ನಡೆಸಬೇಕಾದ ವೋಡಾಫೋನ್, ಐಡಿಯಾ ಸೇರಿ ಹಲವು ದೂರಸಂಪರ್ಕ ಕಂಪನಿಗಳೇ ಆರ್ಥಿಕ ಸಂಕಷ್ಟದಲ್ಲಿವೆ.
ಚೀನಿ ಉಪಕರಣಗಳಿಗೆ ನಿರ್ಬಂಧ ವಿಧಿಸಿದ್ದೇ ಆದಲ್ಲಿ ದೇಶೀಯವಾಗಿ ತಾಂತ್ರಿಕತೆ ಅಭಿವೃದ್ಧಿಗೆ ಸಹಾಯವಾಗುವುದಲ್ಲದೇ, ಚೀನಾಗೆ ಆರ್ಥಿಕವಾಗಿ ಭಾರಿ ಹೊಡೆತ ನೀಡಿದಂತಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಹುವೈ ಕಂಪನಿ ಮುಖ್ಯಸ್ಥ ಪಿಎಲ್ಎ ಜತೆಗೆ ನಂಟು ಹೊಂದಿದ ಆರೋಪದಲ್ಲಿ ಅಮೆರಿಕ ಈಗಾಗಲೇ ಇದಕ್ಕೆ ಈಗಾಗಲೇ ನಿರ್ಬಂಧ ವಿಧಿಸಿದೆ.