ನ್ಯೂಸ್

ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್​ ಯೋಧರ ಗುಂಡಿಗೆ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್​, ಮೋಸ್ಟ್​ ವಾಂಟೆಡ್​ ಉಗ್ರ ರಿಯಾಜ್ ನಾಯ್ಕೂ ಹತ್ಯೆಯಾಗಿದ್ದಾನೆ.

ಪುಲ್ವಾಮಾದ ಆವಂತಿಪುರದ ಬೀಗ್ಪೊರಾ ಗುಲಾಜಾಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಿಯಾಜ್​ ಹತ್ಯೆಯಾಗಿದ್ದಾನೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಮೊದಲು ಉಗ್ರ ರಿಯಾಜ್​ನನ್ನು ಸೆರೆ ಹಿಡಿಯಲಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಅಂತಿಮವಾಗಿ ಆತ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂದು ಸೇನೆ ತಿಳಿಸಿದೆ.

ರಿಯಾಜ್​ ವಾಸವಾಗಿದ್ದ ಗ್ರಾಮದಲ್ಲೇ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ರಿಯಾಜ್​ ಹಾಗೂ ಇಬ್ಬರು ಇಗ್ರರು ಹತರಾಗಿದ್ದಾರೆ.

ಉಗ್ರ ರಿಯಾಜ್​ ಹಾಗೂ ಆತನ ತಂಡ ಬೀಗ್ಪೊರಾದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸೇನೆ ಮಂಗಳವಾರ ತಡ ರಾತ್ರಿ ಉಗ್ರರ ಅಡಗು ದಾಣ ಸುತ್ತುವರಿಯಿತು. ಯೋಧರು ಸುತ್ತುವರಿದಿರುವುದನ್ನು ಗಮನಿಸಿದ ಉಗ್ರರು ಗುಂಡಿನ ದಾಳಿ ಆರಂಭಿಸಿದರು. ಯೋಧರು ಪ್ರತಿ ದಾಳಿ ನಡೆಸಿದರು.

ದಾಳಿ ನಂತರ ಸ್ಥಳದಲ್ಲಿ ಭದ್ರತೆ ಒದಗಿಸಲಾಗಿದೆ. ಮೊಬೈಲ್​ ಹಾಗೂ ಇಂಟರ್​ನೆಟ್​ ಸೇವೆಗಳನ್ನು ಬಂದ್ ಮಾಡಲಾಗಿದೆ.

ಮೋಸ್ಟ್​ ವಾಂಟೆಡ್​ ಉಗ್ರ ರಿಯಾಜ್​ ಯಾರು?

ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಹಳೇ ಮುಖಂಡರಲ್ಲಿ ಒಬ್ಬ ರಿಯಾಜ್​ ನಾಯ್ಕೂ.

ರಿಯಾಜ್​ ಎ++ (ಉನ್ನತ ದರ್ಜೆ) ಕೆಟೆಗರಿಯ ಉಗ್ರ. ಈತನ ಸುಳಿವು ನೀಡಿದವರಿಗೆ 12 ಲಕ್ಷ ರೂ.ನೀಡುವುದಾಗಿ ಈ ಹಿಂದೆಯೇ ಘೋಷಿಸಲಾಗಿತ್ತು.

ಆವಂತಿಪುರ ಜಿಲ್ಲೆಯ ರಿಯಾಜ್​ ನಾಯ್ಕೂ ಅನೇಕ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿ.

2016ರ ಜನವರಿಯಲ್ಲಿ ಮೊದಲ ಬಾರಿಗೆ ಈತ ಮುನ್ನೆಲೆಗೆ ಬಂದಿದ್ದಾನೆ. ಎನ್​ಕೌಂಟರ್​​ನಲ್ಲಿ ಹತ್ಯೆಯಾಗಿದ್ದ ಉಗ್ರ ಶರೀಕ್​ ಅಹ್ಮದ್ ಭಟ್​ನ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ. ಅಹ್ಮದ್​ ಮೃತದೇಹವನ್ನು ಹೊತ್ತು ತರುವಾಗ ನಾಯ್ಕೂ ಹಲವು ಬಾರಿ ಗಾಳಿಯಲ್ಲಿ ಗುಂಡು ಹೊಡೆದಿದ್ದ. ಈ ಮೂಲಕ ಮೃತ ಉಗ್ರನಿಗೆ ಗೌರವ ಸಲ್ಲಿಸಿದ್ದ.

2017ರಲ್ಲಿ ರಿಯಾಜ್​ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದ. ಅದರಲ್ಲಿ ಕಾಶ್ಮೀರಿ ಪಂಡಿತರನ್ನು ವಾಪಸ್​ ಬರುವಂತೆ ಕೇಳಿಕೊಂಡಿದ್ದ. ಅಲ್ಲದೆ, ಉಗ್ರರು ಕಾಶ್ಮೀರಿ ಪಂಡಿತರಿಗೆ ಶತ್ರುಗಳಲ್ಲ ಎಂದು ಹೇಳಿದ್ದ. (ಏಜೆನ್ಸೀಸ್​)