ತುಮಕೂರು: ಕುರುಬ ಸಮಾಜದ ಪೂರ್ವಜರ ಸಮಾಧಿಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಠವೊಂದರ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ನಿಗಾ ವಹಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀಗುರುಗುಂಡ ಬ್ರಹ್ಮೇಶ್ವರ ಮಠದ ಆವರಣದಲ್ಲಿನ 10ಕ್ಕೂ ಹೆಚ್ಚು ಸಮಾಧಿಗಳು ಧ್ವಂಸಗೊಂಡ ಹಿನ್ನೆಲೆಯಲ್ಲಿ ಈ ಪೊಲೀಸ್ ಭದ್ರತೆ ನೀಡಲಾಗಿದೆ.
ಕಳೆದ ಶುಕ್ರವಾರ ಸಮಾಧಿಗಳು ಧ್ವಂಸಗೊಂಡಿದ್ದು, ಅಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಠಕ್ಕೆ ಭೇಟಿ ಕೊಟ್ಟಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ತುಮಕೂರು ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ಅಂದೇ ಸ್ಥಳಕ್ಕೆ ಆಗಮಿಸಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಹೆಂಡ್ತಿ ಆ್ಯಪ್ ಡೌನ್ಲೋಡ್ ಮಾಡೋದು ತಡವಾಯ್ತೆಂದು ಸಿಟ್ಟಾದ ಗಂಡ; ಸಮಾಧಾನಿಸಲು ಬಂದ ಮಗನ ಎದೆಗೆ ಚೂರಿ ಇರಿತ!
ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರುಬ ಸಮುದಾಯದಿಂದ ನಂಜಾವಧೂತ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದೆಡೆ ಮಠದ ಕಡೆಯಿಂದ ದುಷ್ಕರ್ಮಿಗಳ ಕೃತ್ಯ ಎಂದು ದೂರು ದಾಖಲಾಗಿದೆ. ಎರಡೂ ದೂರುಗಳ ಹಿನ್ನೆಲೆಯಲ್ಲಿ ಪಟ್ಟನಾಯಕನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.