ಮುಂಬೈ: ತಮ್ಮ ನೆಚ್ಚಿನ ತಾರೆಯರು ಕಾಣಿಸಿಕೊಂಡಾಗ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಹಲವು ರೀತಿಯಲ್ಲಿ ತೋರಿಸುತ್ತಾರೆ. ಆದರೆ ಕೆಲವರ ಅತಿರೇಕದ ನಡವಳಿಕೆಗೆ ನಟರಿಗಿಂತ ನಟಿಯರು ಸಾಕಷ್ಟು ಮುಜುಗರ ಮತ್ತು ತೊಂದರೆ ಅನುಭವಿಸುವುದುಂಟು.
ಕಾಜಲ್ ಅಗರ್ವಾಲ್ ಇತ್ತೀಚೆಗೆ ಇಂತಹುದೇ ಒಂದು ಘಟನೆಯ ಬಗ್ಗೆ ಹೇಳಿದರು. ‘ಸತ್ಯಭಾಮ’ ಚಿತ್ರದ ಪ್ರಚಾರದ ಅಂಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು, ಈ ಹಿಂದೆ ತಾವು ನಟಿಸಿದ್ದ ಸಿನಿಮಾವೊಂದರ ಶೂಟಿಂಗ್ ವೇಳೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
''ಕೆಲವು ವರ್ಷಗಳ ಹಿಂದೆ ನಾನು ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಮೊದಲ ದಿನದ ಚಿತ್ರೀಕರಣದ ನಂತರ, ಚಿತ್ರದ ಸಹಾಯಕ ನಿರ್ದೇಶಕರು ಅನುಮತಿಯಿಲ್ಲದೆ ನನ್ನ ವ್ಯಾನಿಟಿ ವ್ಯಾನ್ ಗೆ ಬಂದರು. ಅವನು ತನ್ನ ಅಂಗಿಯನ್ನು ತೆಗೆದು ತನ್ನ ಎದೆಯ ಮೇಲೆ ನನ್ನ ಹೆಸರಿನ ಹಚ್ಚೆ ಹಾಕಿಸಿಕೊಂಡಿರುದನ್ನು ತೋರಿಸಿದನು. ಯಾರೂ ಇಲ್ಲದ ಸಮಯದಲ್ಲಿ ಅವನು ಹಾಗೆ ಮಾಡಿದ್ದರಿಂದ ನನಗೆ ಭಯವಾಯಿತು.
ಟ್ಯಾಟೂ ರೂಪದಲ್ಲಿ ನನ್ನ ಮೇಲಿನ ನಿಮ್ಮ ಪ್ರೀತಿಯನ್ನು ತೋರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಆದರೆ, ಈ ರೀತಿ ಮಾಡುವುದು ಸರಿಯಲ್ಲ ಎಂದು ಮೃದುವಾಗಿ ಎಚ್ಚರಿಸಿದೆ ಎಂದು ಹೇಳಿದರು.
ಸುಮನ್ ಚಿಕ್ಕಾಲ ನಿರ್ದೇಶನದ 'ಸತ್ಯಭಾಮ' ಚಿತ್ರದಲ್ಲಿ ಕಾಜಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ನವೀನ್ ಚಂದ್ರ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಸಿನಿಮಾ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದೆ.