ನ್ಯೂಸ್

ರೈತ ಮಿತ್ರ: ಪಶು ಆಹಾರ, ಎಲೆಹಿಂಡಿ, ಬದನೆ ಬೆಳೆ ಬಗ್ಗೆ ಇಲ್ಲಿದೆ ಮಾಹಿತಿ

ಪಶು ಆಹಾರ, ಎಲೆಹಿಂಡಿ ಬಗ್ಗೆ ಮಾಹಿತಿ ಕೋರಿದ ಸೈಯದ್ ಗುಡಿಬಂಡೆ

ದ್ವಿದಳ ಮೇವಿನ ಬೆಳೆಗಳನ್ನು ಹೂವಾಡುವ ಹಂತದಲ್ಲಿ ಕಟಾವು ಮಾಡಿ, ಕಾಂಡಗಳಿಂದ ಎಲೆ ಬೇರ್ಪಡದಂತೆ ಸ್ವಚ್ಛ ಪ್ರದೇಶದಲ್ಲಿ ಒಣಗಿಸಿ ಪುಡಿಮಾಡಿದ ಹಿಟ್ಟಿಗೆ ಎಲೆಹಿಂಡಿ ಅಥವಾ ಲೀಫ್ ಮೀಲ್ ಎನ್ನುತ್ತಾರೆ. ಇದು ಪಶುಗಳಿಗೆ ರುಚಿಕರ ಮೇವು. ಇದರಲ್ಲಿ ಉತ್ತಮ ಗುಣಮಟ್ಟದ ಪೊ›ಟೀನ್ ಅಂಶ ಇದ್ದು, ಇದನ್ನು ವರ್ಷಪೂರ್ತಿ ಶೇಖರಿಸಿಟ್ಟುಕೊಳ್ಳಬಹುದು. ಕಡಿಮೆ ಖರ್ಚು, ಸಾಂದ್ರಿಕರಿಸಿದ ಪಶು ಆಹಾರದ ಬಳಕೆ ಶೇ.50 ಕಡಿಮೆ ಮಾಡಬಹುದು. ಎಲೆಹಿಂಡಿಯು ಮೇವಿನ ಕೊರತೆ ಇದ್ದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಉಪಯೋಗಕ್ಕೆ ಉತ್ತಮ. ಎಲೆಹಿಂಡಿ ತಯಾರಿಸಲು ಸೂಕ್ತವಾದ ಮೇವಿನ ಬೆಳೆಗಳು ಸ್ಟೈಲೊಸ್ಯಾಂಥಸ್ ಹೆಮಾಟ, ಕುದುರೆಮೆಂತೆ, ಸೂಬಾಬೂಲ್ ಮತ್ತು ಚೊಗಚಿ ಇತ್ಯಾದಿ.

| ಡಾ. ಕೆ.ಪಿ. ರಘುಪ್ರಸಾದ್ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು

ಬದನೆ ಬೆಳೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳುವಿನ ನಿರ್ವಹಣೆ ಹೇಗೆ? - ಕಾತ್ಯಾಯಿನಿ ಮದ್ದೂರು

ಮರಿಹುಳುಗಳು ಬದನೆ ಎಲೆಯ ದೇಟು ಹಾಗೂ ಮಧ್ಯನರಗಳನ್ನು ಕೊರೆದು ತಿನ್ನುತ್ತವೆೆ. ಇದರಿಂದ ಕುಡಿ ಜೋತು ಬಿದ್ದು ಒಣಗುತ್ತದೆ. ಹೂವಿನ ಮೊಗ್ಗುಗಳನ್ನು ಕೊರೆದು ತಿನ್ನುವುದರಿಂದ ಮೊಗ್ಗುಗಳು ಕೆಳಗೆ ಬೀಳುತ್ತವೆ. ಕಾಯಿಯನ್ನು ಕೊರೆದು ಒಳಸೇರಿ ಅನಂತರ ತಿನ್ನುತ್ತವೆ. ಇದರಿಂದ ಕಾಯಿಗಳ ಮೇಲೆ ತೂತುಗಳನ್ನು ಕಾಣಬಹುದು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗಗಳು ಕಂಡುಬರುತ್ತವೆ.

ನಿರ್ವಹಣೆ: ಸಸಿ ನಾಟಿ ಮಾಡುವ ಸಮಯದಲ್ಲಿ ಬೇವಿನ ಹಿಂಡಿ ಒಂದು ಹೆಕ್ಟೇರಿಗೆ 250 ಕೆ.ಜಿ ಸೇರಿಸುವುದು. ನಂತರ ತಿಂಗಳಿಗೊಮ್ಮೆ ಎರಡು ಬಾರಿ ಮಣ್ಣಿನಲ್ಲಿ ಬೆರೆಸಬೇಕು. ತೊಂದರೆಗೆ ಒಳಗಾದ ಚಿಗುರು, ಮೊಗ್ಗು ಮತ್ತು ಕಾಯಿಗಳನ್ನು ಕಿತ್ತು ನಾಶಪಡಿಸುವುದು. ನಿರಂತರ ಬದನೆ ಬೆಳೆಯುವುದನ್ನು ತಪ್ಪಿಸುವುದು. ಒಂದು ಹೆಕ್ಟೇರಿಗೆ 12 ಮೋಹಕ ಬಲೆಗಳನ್ನು ಅಳವಡಿಸುವುದು. ನಂತರ ಒಂದು ಲೀಟರ್ ನೀರಿಗೆ ಶೇ.1ರ ಅಜಾಡಿರಾಕ್ಟಿನ್ 3 ಎಂಎಲ್ ಅಥವಾ ಕ್ವಿನಾಲ್​ಫಾಸ್ 2 ಎಂಎಲ್​ನಂತೆ ಸಿಂಪಡಿಸಬೇಕು.

| ಡಾ. ಕೆ.ಪಲ್ಲವಿ ಸಸ್ಯ ಸಂರಕ್ಷಣಾ ತಜ್ಞರು

ಚೆಂಡು ಹೂವಿನಲ್ಲಿ ಕಂಡು ಬರುವ ಎಲೆ ಮುಟುರು ರೋಗದ ನಿರ್ವಹಣೆ ಬಗ್ಗೆ ತಿಳಿಸಿ - ಬಸವರಾಜ ತರೀಕೆರೆ

ಎಲೆ ಮುಟುರು ರೋಗಕ್ಕೆ ತುತ್ತಾದ ಗಿಡಗಳಲ್ಲಿ ಹಳದಿ ಮಿಶ್ರಿತ ಹಸಿರು ಭಾಗವನ್ನು ಎಲೆಯಲ್ಲಿ ಕಾಣಬಹುದು. ಎಲೆಗಳ ಅಂಚುಗಳು ಮುದುಡಿಕೊಂಡಿರುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ನಿರ್ವಹಣೆ: ಈ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಹಾಕಿ ನಾಶಪಡಿಸಬೇಕು. ಹೀಗೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದು. ನಂತರ ಒಂದು ಲೀಟರ್ ನೀರಿಗೆ ಮ್ಯಾಂಕೋಜೆಬ್ 2 ಗ್ರಾಂ ಬೆರೆಸಿ ಸಿಂಪಡಿಸಬೇಕು.

| ಡಾ. ಸಿ.ಪಿ. ಮಂಜುಳಾ ಸಸ್ಯರೋಗ ತಜ್ಞರು