ನ್ಯೂಸ್

ಇನ್ನೊಂದು ವಿಕೆಟ್ ಎತ್ತಲು ಕೈ ಕಾರ್ಯತಂತ್ರ: ಬೈರತಿ ಬಸವರಾಜ್​ಗೆ ಖೆಡ್ಡಾ; ಕೈಕೊಟ್ಟವರಿಗೆ ಪಾಠ ಕಲಿಸುವ ಲೆಕ್ಕಾಚಾರ

| ಶ್ರೀಕಾಂತ್ ಶೇಷಾದ್ರಿ ಬೆಳಗಾವಿ

ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾದವರ ವಿರುದ್ಧ ಕತ್ತಿ ಮಸೆಯುತ್ತಿರುವ ಕಾಂಗ್ರೆಸ್ ವಲಸಿಗರ ಒಂದೊಂದೇ ವಿಕೆಟ್ ಕಬಳಿಸಿಕೊಂಡು ಬಂದಿದ್ದು, ಇದೀಗ ಬೈರತಿ ಬಸವರಾಜ್ ಅವರನ್ನು ಖೆಡ್ಡಾಗೆ ಕೆಡವಲು ರಣತಂತ್ರವೊಂದನ್ನು ಕೈ ನಾಯಕರು ಒಟ್ಟಾಗಿ ರೂಪಿಸಿದ್ದಾರೆ.

ತಮಗೆ ಕೈಕೊಟ್ಟು ಹೋದವರಿಗೆ ಸರಿಯಾಗಿ ಪಾಠ ಕಲಿಸುವುದು ಒಂದು ಕಡೆಯಾದರೆ ಬಿಜೆಪಿ ಸರ್ಕಾರದಲ್ಲಿ ಒಬ್ಬ ಮಂತ್ರಿಯಿಂದ ರಾಜೀನಾಮೆ ಕೊಡಿಸಿದರೆ ಆಗುವ ರಾಜಕೀಯ ಪರಿಣಾಮದಿಂದ ಆಗುವ ಲಾಭವನ್ನರಿತು, ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಅಂದು ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯುವಲ್ಲಿ ಪ್ರತಿಪಕ್ಷ ಬಿಜೆಪಿ ಸಫಲವಾಗಿತ್ತು. ಅಂದು ತಾವೆದುರಿಸಿದ ಸಂಕಟ ಮರೆಯದ ಸಿದ್ದರಾಮಯ್ಯ, ಅದೇ ಘಟನೆಯನ್ನು ಪುನರಾವರ್ತನೆಯಾಗಿಸಲು ಹಠತೊಟ್ಟಿರುವುದು ಸ್ಪಷ್ಟವಾಗಿದೆ. ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಬೈರತಿ ಪ್ರಕರಣವನ್ನೇ ಮುಂದುವರಿಸುವ ಸುಳಿವು ನೀಡಿದ್ದಾರೆ. ವಲಸೆ ಹೋದ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಬೆಳೆಸುವ ಮತ್ತು ಮುಂದಿನ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ಕೆಲಸದಲ್ಲಿ ಕಾಂಗ್ರೆಸ್ ಸದ್ದಿಲ್ಲದೇ ಪ್ರಯತ್ನ ನಡೆಸಿದೆ. ಇದೀಗ ಬೈರತಿ ಬಸವರಾಜ್ ಪ್ರತಿನಿಧಿಸುವ ಕೆ.ಆರ್.ಪುರಂ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಇದೇ ಕಾರಣಕ್ಕೆ ಅವರು ಪರಿಷತ್ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿಲ್ಲ. ಬೈರತಿ ಬಸವರಾಜ್ ಅವರನ್ನು ಈಗ ಸಂಪುಟದಿಂದ ಕೈಬಿಡುವಂತೆ ಮಾಡಿದರೆ ಬೈರತಿಗೆ ಹಿನ್ನೆಡೆಯುಂಟುಮಾಡಿದಂತೆ ಮತ್ತು ಮುಂದಿನ ಚುನಾವಣೆಯಲ್ಲಿ ಎದುರಾಗುವ ಅವರನ್ನು ಎದುರಿಸುವುದಕ್ಕೆ ಒಂದಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಅಲ್ಲದೆ ಮುಖ್ಯಮಂತ್ರಿ ಬದಲಾವಣೆ, ಸಚಿವರ ಕೈಬಿಡುವ ಪ್ರಕರಣ ನಡೆದರೆ ಜನರಲ್ಲಿ ಅಸ್ಥಿರ ಸರ್ಕಾರದ ಭಾವನೆ ಬೆಳೆಯಲಿದೆ ಎಂಬ ಲೆಕ್ಕಾಚಾರದಡಿಯೇ ಸಿದ್ದರಾಮಯ್ಯ ಪ್ರಯತ್ನ ಹೆಚ್ಚಿಸಿದ್ದಾರೆ.

ಮುಖ್ಯಾಂಶಗಳು

  • ಮಸ್ಕಿ ಪ್ರತಾಪ್ ಗೌಡರನ್ನು ಉಪ ಚುನಾವಣೆಯಲ್ಲಿ ಹಠತೊಟ್ಟು ಸೋಲಿಸಿ ಮೂಲೆಗೆ ತಳ್ಳಲಾಗಿದೆ.
  • ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಹಿರಿಯ ನಾಯಕರ ಕೈವಾಡ ಅನುಮಾನ ಜಗಜ್ಜಾಹಿರಾಗಿದೆ.
  • ಡಾ. ಸುಧಾಕರ್ ವಿರುದ್ಧ ಭ್ರಷ್ಟಾ ಚಾರದ ಆರೋಪ ಮಾಡಿ ಇಮೇಜ್​ಗೆ ಧಕ್ಕೆ ತರುವ ಪ್ರಯತ್ನ ನಿರಂತರ
  • ರೋಷನ್ ಬೇಗ್ ಅವರಾಗಿಯೇ ಬದಿಗೆ ಸರಿಯುವ ವಾತಾವರಣ ಸೃಷ್ಟಿಯಾಯಿತು. ಪುನಃ ರಾಜಕೀಯ ಪ್ರವೇಶ ಅನುಮಾನ.
  • ಬೈರತಿ ಬಸವರಾಜ್ ಜತೆಗೆ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಹೋದ ಪಕ್ಷೇತರ ಶಾಸಕ ಶಂಕರ್​ರನ್ನೂ ಕೂಡ ಈ ಪ್ರಕರಣದ ಮೂಲಕ ಮಣಿಸಲು ಅವಕಾಶ.

ಈ ವಿಚಾರದಲ್ಲಿ ಸಚಿವರೊಬ್ಬರು ಭೇಟಿ ಮಾಡಿದ್ದರು. ಸಂಧಾನ ಮಾಡುವು ದಕ್ಕೆ ಪ್ರಯತ್ನಿಸಿದ್ದರು. ಸುಧಾಕರ್ ನನ್ನ ಬಳಿಯೂ ಮಾತನಾಡಿದ್ದರು. | ನಾರಾಯಣಸ್ವಾಮಿ ವಿಧಾನ ಪರಿಷತ್ ಸದಸ್ಯ ರಕ್ಷಣೆಗೆ ಬಿಜೆಪಿಗರ ಹೆಣಗಾಟ: ಬೈರತಿ ಬಸವರಾಜ್ ಪ್ರಕರಣ ವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ವಾಗದಂತೆ ನೋಡಿಕೊಳ್ಳುವ ಪ್ರಯತ್ನ ಗುರುವಾರ ಸಂಜೆ ನಡೆದಿದೆ. ಸಂಪುಟದ ಇಬ್ಬರು ಸದಸ್ಯರು ಕಾಂಗ್ರೆಸ್​ನ ನಾಯ ಕರನ್ನು ಸಂರ್ಪಸಿ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನ ಶನಿವಾರ ಮತ್ತು ಭಾನುವಾರ ಸಹ ಮುಂದುವರಿಸುವ ಸಾಧ್ಯತೆ ಇದೆ. ಇದೇ ವೇಳೆ ವಲಸಿಗ ಸಚಿವರಲ್ಲಿ ಒಬ್ಬರಾದ ಮುನಿರತ್ನ ಅವರು ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ, ಈ ಸಂಕಟದಿಂದ ಹೊರಬರುವ ಬಗ್ಗೆ ಸಲಹೆ ಕೇಳಿದ್ದಾರೆನ್ನ ಲಾಗಿದೆ. ಹಾಗೆಯೇ ಡಾ.ಕೆ.ಸುಧಾಕರ್, ಮುನಿರತ್ನ, ಸೋಮಶೇಖರ್ ಅವರು ಬೈರತಿ ಬಸವರಾಜ್ ರಕ್ಷಣೆಗೆ ಹೆಣಗಾಟ ನಡೆಸಿದ್ದಾರೆ.