ಕಝಾನ್: ಭಯೋತ್ಪಾದನೆ ಪಿಡುಗಿನ ವಿರುದ್ಧ ಮತ್ತೆ ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, ಅದರ ವಿರುದ್ಧ ಹೋರಾಡಲು ಏಕಚಿತ್ತದಿಂದ ಗಮನವನ್ನು ಕೇಂದ್ರೀಕರಿಸಬೇಕು ಹಾಗೂ ಆ ಪ್ರಯತ್ನದಲ್ಲಿ ಎಲ್ಲರೂ ದೃಢವಾದ ಬೆಂಬಲ ನೀಡಬೇಕು ಎಂದು ಕರೆ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ ಮೋದಿ, ಈ ಸವಾಲನ್ನು ಎದುರಿಸುವಲ್ಲಿ ಇಬ್ಬಗೆ ಧೋರಣೆಗೆ ಅವಕಾಶವೇ ಇಲ್ಲವೆಂದು ಪ್ರತಿಪಾದಿಸಿದರು.
ನಮ್ಮ ದೇಶಗಳಲ್ಲಿ ಯುವಜನರನ್ನು ಉಗ್ರಗಾಮಿ ಗಳನ್ನಾಗಿ ಮಾಡುವುದನ್ನು ತಡೆಯಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಇರಾನ್ ಅಧ್ಯಕ್ಷ ಮಾಸೂದ್ ಪೆಝೆಶ್ಕಿಯನ್ ಮುಂತಾದ ಬ್ರಿಕ್ಸ್ ದೇಶಗಳ ಅಗ್ರ ನಾಯಕರ ಸಮ್ಮುಖದಲ್ಲಿ ಮೋದಿ ಹೇಳಿದರು. ಭಯೋತ್ಪಾದನೆ ಹಾಗೂ ಅದಕ್ಕೆ ಆರ್ಥಿಕ ನೆರವು ಒದಗಿಸುವುದನ್ನು ತಡೆಯಲು ಸ್ಥಿರವಾದ ಮನಸ್ಸು ಮತ್ತು ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.
ಪಾಕ್ ಮೂಲದ ಕೆಲವರನ್ನು ಘೋಷಿತ ಉಗ್ರರೆಂದು ಸಾರುವ ವಿಶ್ವಸಂಸ್ಥೆಯಲ್ಲಿ ಮಂಡನೆಯಾದ ಹಲವು ಪ್ರಸ್ತಾವನೆಗಳಿಗೆ ಚೀನಾ ಅಡ್ಡಿಪಡಿಸಿದ್ದರಿಂದ ‘ಇಬ್ಬಗೆ ಧೋರಣೆ’ ಎಂಬ ಟಿಪ್ಪಣಿಗೆ ಮಹತ್ವವಿದ್ದು ಚೀನಾಕ್ಕೆ ಪರೋಕ್ಷ ಟಾಂಗ್ ನೀಡಿದಂತಿದೆ. ಅಂತಾರಾಷ್ಟಿŠೕಯ ಭಯೋತ್ಪಾದನೆ ಕುರಿತ ಸಮಗ್ರ ನಿಯಮದ ವಿಚಾರ ವಿಶ್ವಸಂಸ್ಥೆಯಲ್ಲಿ ದೀರ್ಘ ಸಮಯದಿಂದ ಬಾಕಿ ಉಳಿದಿದ್ದು ಆ ಸಂಬಂಧ ನಾವೆಲ್ಲ ಕೆಲಸ ಮಾಡಬೇಕಾಗಿದೆ ಎಂದು ಮೋದಿ ಹೇಳಿದರು. ಅದೇ ರೀತಿ, ಸೈಬರ್ ಭದ್ರತೆ ಹಾಗೂ ಸುರಕ್ಷಿತ ಕೃತಕ ಬುದ್ಧಿಮತ್ತೆ ವಿಚಾರದಲ್ಲೂ ಜಾಗತಿಕ ನಿಯಮಗಳಿಗಾಗಿ ಶ್ರಮಿಸುವುದು ಅಗತ್ಯ ಎಂದರು.
ಆರ್ಥಿಕ ಸಹಕಾರ ವೃದ್ಧಿ: ಬ್ರಿಕ್ಸ್ ಕೂಟದ ಶೃಂಗಸಭೆ ಭಾಗವಾಗಿ ರಷ್ಯಾ ಅಧ್ಯಕ್ಷ ಪುತಿನ್, ಪಾಶ್ಚಿಮಾತ್ಯ ದೇಶಗಳಿಗೆ ಸವಾಲೊಡ್ಡುವ ಉದ್ದೇಶದಿಂದ ಷಿ ಜಿನ್ಪಿಂಗ್, ಮೋದಿ ಮತ್ತಿತರ ವಿಶ್ವ ನಾಯಕರ ಸಮಾವೇಶ ಆಯೋಜಿಸಿದ್ದರು. ಹಣಕಾಸು ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸು ವುದು ಹಾಗೂ ಬ್ರಿಕ್ಸ್ ಕೂಟದ ವಿಸ್ತರಣೆ ಇದರ ಪ್ರಮುಖ ಅಜೆಂಡಾ ಎಂದು 36 ದೇಶಗಳು ಭಾಗವಹಿಸಿದ ಬ್ರಿಕ್ಸ್ ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಪುತಿನ್ ಹೇಳಿದರು.
ಯುದ್ಧಕ್ಕೆ ಬೆಂಬಲವಿಲ್ಲ: ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಬೆಂಬಲ ನೀಡುತ್ತದೆಯೇ ಹೊರತು ಯುದ್ಧಕ್ಕಲ್ಲ ಎಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು. ಈ ಮೂಲಕ, ರಷ್ಯಾ-ಯೂಕ್ರೇನ್ ಕದನವನ್ನು ಶಾಂತಿಯುತ ಮಾತುಕತೆಗಳಿಂದ ಬಗೆಹರಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು. ಯುದ್ಧಗಳು, ಆರ್ಥಿಕ ಅನಿಶ್ಚತತೆ, ಹವಾಮಾನ ಬದಲಾವಣೆ, ಭಯೋತ್ಪಾದನೆ ಮುಂತಾದ ತುರ್ತು ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಜಗತ್ತನ್ನು ಸರಿಯಾದ ದಾರಿಯಲ್ಲಿ ಒಯ್ಯುವಲ್ಲಿ ಬ್ರಿಕ್ಸ್ ಧನಾತ್ಮಕ ಪಾತ್ರ ವಹಿಸಬಲ್ಲದು ಎಂದು ಅಭಿಪ್ರಾಯಪಟ್ಟರು. ಕೋವಿಡ್ನಂಥ ಸವಾಲನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಎದುರಿಸಿರುವಾಗ ಮುಂದಿನ ತಲೆಮಾರುಗಳಿಗೆ ಒಂದು ಸುರಕ್ಷಿತ, ಶಕ್ತಿಯುತ ಹಾಗೂ ಸಮೃದ್ಧ ಭವಿಷ್ಯವನ್ನು ಖಾತರಿಪಡಿಸಲು ಹೊಸ ಅವಕಾಶಗಳ ಸೃಷ್ಟಿಗೆ ನಾವು ನಿಶ್ಚಿತವಾಗಿಯೂ ಸಮರ್ಥರಾಗಲಿದ್ದೇವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಬ್ರಿಕ್ಸ್ ವಿಸ್ತರಣೆ: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ಬ್ರಿಕ್ಸ್ ಕೂಟದ ವಿಸ್ತರಣೆ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಹೊಸ ದೇಶಗಳನ್ನು ಪಾಲುದಾರರನ್ನಾಗಿ ಸ್ವಾಗತಿಸಲು ಭಾರತ ಸಿದ್ಧವಿದೆ ಎಂದು ಹೇಳಿದರು.