ನ್ಯೂಸ್

ಪ್ರಿಯತಮೆಯ ಮುಖಕ್ಕೆ ಸ್ಯಾನಿಟೈಸರ್‌ ಎರಚಿ ಬೆಂಕಿ ಹಚ್ಚಿದ!

ಚಂಡೀಗಢ: ಪದೇ ಪದೇ ಹಣಕ್ಕಾಗಿ ಸ್ನೇಹಿತೆಯನ್ನು ಪೀಡಿಸುತ್ತಿದ್ದ ಯುವಕನೊಬ್ಬ ಆಕೆ ಎರಡು ಸಾವಿರ ರೂಪಾಯಿ ನೀಡಲು ನಿರಾಕರಿಸಿದ ಕಾರಣ, ಆಕೆಯ ಮುಖಕ್ಕೆ ಸ್ಯಾನಿಟೈಸರ್‌ ಎಸೆದು ಬೆಂಕಿ ಹಚ್ಚಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

22 ವರ್ಷದ ಯುವತಿಯ ಮುಖಕ್ಕೆ ಸ್ಯಾನಿಟೈಸರ್​ ಎರಚಿ, ಲೈಟರ್​ನಿಂದ ಬೆಂಕಿ ಹಚ್ಚಿದ್ದಾನೆ. ಯುವತಿಯ ಮುಖಕ್ಕೆ ಗಂಭೀರ ಸುಟ್ಟುಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿಲ್ಲಾಂಗ್​ ಮೂಲದ ಯುವತಿ ಕಳೆದ ವರ್ಷವಷ್ಟೇ ಕೆಲಸ ಅರಸಿ ಚಂಡೀಗಢಕ್ಕೆ ಬಂದಿದ್ದಳು. ಅಲ್ಲಿ ನರೇಶನ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಒಟ್ಟಿಗೆ ಲಿವ್‌ ಇನ್‌ ರಿಲೇಷನ್‌ನಲ್ಲಿ ವಾಸಿಸುತ್ತಿದ್ದರು. ಈ ನಡುವೆ ಸರಿಯಾಗಿ ಕೆಲಸ ಇಲ್ಲದ ನರೇಶ್‌ ಸದಾ ಹಣಕ್ಕಾಗಿ ಯುವತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ಪದೇ ಪದೇ ಹಣ ಕೊಟ್ಟು ರೋಸಿಹೋದ ಯುವತಿ ಅವನು ಬೇಡಿಕೆ ಒಡ್ಡಿದ್ದ ಎರಡು ಸಾವಿರ ರೂಪಾಯಿ ನೀಡಲು ನಿರಾಕರಿಸಿದ್ದಾಳೆ. ಇದೇ ಕಾರಣಕ್ಕೆ ರೊಚ್ಚಿಗೆದ್ದಿರುವ ನರೇಶ್‌, ಆಕೆಯ ಮೇಲೆ ಸ್ಯಾನಿಟೈಸರ್‌ ಎಸೆದು ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ.

ನೋವಿನಿಂದ ಚೀರಾಡಿದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಯುವತಿ ನಡೆದಿರುವ ವಿಷಯ ಹೇಳಿದ್ದಾಳೆ. ಯುವತಿಯ ಹೇಳಿಕೆ ಆಧಾರದ ಮೇಲೆ ನರೇಶ್‌ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.