ಉತ್ತರ ಪ್ರದೇಶ: ಮೂರು ವರ್ಷದ ಬಾಲಕನೊಬ್ಬ ಹಾವಿನ ಮರಿಯನ್ನು ಜಗಿದು ಸಾಯಿಸಿದ ಘಟನೆ ಫರೂಕಾಬಾದ್ ಜಿಲ್ಲೆಯ ಮೊಹಮ್ಮದಾಬಾದ್ ಪ್ರದೇಶದ ಮದ್ನಾಪುರ ಗ್ರಾಮದಲ್ಲಿ ನಡೆದಿದೆ. ವಿಷಯ ತಿಳಿದು ಗಾಬರಿಗೊಂಡ ಪಾಲಕರು ಸತ್ತ ಹಾವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಮಗುವಿನೊಂದಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ. 24 ಗಂಟೆಗಳ ಕಾಲ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಬಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದಿನೇಶ್ ಕುಮಾರ್ ಎಂಬುವವರ ಪುತ್ರ ಆಯುಷ್ ತನ್ನ ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಕಿರುಚಾಡಿದ್ದಾನೆ. ಗಾಬರಿಯಲ್ಲಿ ಅಜ್ಜಿ ಬಂದು ನೋಡಿದಾಗ ಹಾವೊಂದು ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ. ಮುಖದಲ್ಲಿ ರಕ್ತ ಕಾಣುತ್ತಿದ್ದಂತೆ ಕೂಡಲೇ ಆಯುಷ್ನ ಬಾಯಿ ಸ್ವಚ್ಛಗೊಳಿಸಿದ ಪಾಲಕರು, ತಡಮಾಡದೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಚಿಕಿತ್ಸೆ ನೀಡಲು ವೈದ್ಯರಿಗೆ ಸುಲಭ ಆಗಲೆಂದು ಬಾಲಕ ಕಚ್ಚಿ ಕೊಂದಿರುವ ಹಾವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪಾಲಕರು ಆಸ್ಪತ್ರೆಗೆ ತಂದಿದ್ದಾರೆ. 'ವಿಷಕಾರಿ ಅಲ್ಲದ ಹಾವನ್ನು ಆಯುಷ್ ಜಗಿದಿದ್ದಾನೆ. ಹೀಗಾಗಿ ಅದೃಷ್ಟ ಎಂಬಂತೆ ಪ್ರಾಣಕ್ಕೇನು ತೊಂದರೆಯಾಗಿಲ್ಲ. ಅಗತ್ಯ ಔಷಧ ನೀಡಲಾಗಿದ್ದು, ಇದೀಗ ಚೇರಿಸಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದು ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಡಾ.ಸಲೀಂ ಅನ್ಸಾರಿ ತಿಳಿಸಿದ್ದಾರೆ. (ಏಜೆನ್ಸೀಸ್)