ಬೆಂಗಳೂರು: ಬಿಡಿಎ ಅಪಾರ್ಟ್‌ಮೆಂಟ್ ಎರಡನೇ ಮಹಡಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರ ಗಾಯಕ್ಕೊಳಗಾದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿ ಇದೆ. ಕೆಂಗೇರಿ ಬಿಡಿಎ ಜ್ಞಾನಭಾರತಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಬೆಳಗ್ಗೆ 11.07ಕ್ಕೆ ಅನಾಹುತ ಸಂಭವಿಸಿದೆ. ರಾಹುಲ್ (3) ಎಂಬಾತ ಗಂಭೀರವಾಗಿ ಗಾಯಗೊಂಡ ಮಗು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಮೂಲದ ಗಾರೆ ಮೇಸ್ತ್ರಿ ಶಿವಪ್ಪ ಮತ್ತು ಅಂಬಿಕಾ ದಂಪತಿಯ ಪುತ್ರ ರಾಹುಲ್ ಗಾಯಗೊಂಡವ. ಈ ದಂಪತಿ ಕಳೆದ 3 ವರ್ಷದಿಂದ ಮಗನೊಂದಿಗೆ ಅಪಾರ್ಟ್‌ಮೆಂಟ್‌ನ ಕಾವೇರಿ ಎಚ್ ಬ್ಲಾಕ್ ಪ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಬೆಳಗ್ಗೆ 11.07ರಲ್ಲಿ ಬಾಲ್ಕನಿಯಲ್ಲಿ ಚೇರ್ ಮೇಲೆ ನಿಂತುಕೊಂಡು ಮಗು ಆಟವಾಡುತ್ತಿದ್ದಾಗ ಅನಾಹುತ ಸಂಭವಿಸಿದೆ.
ತಕ್ಷಣ ಅಕ್ಕಪಕ್ಕದ ನಿವಾಸಿಗಳು ಮತ್ತು ಪಾಲಕರು ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಾಹುತದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.