ಕೇರಳ: ರೋಗಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಸಾವು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಪಂಥಾಲೂರ್ನಲ್ಲಿ ಈ ಘಟನೆ ನಡೆದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಫೆಮಿನಾ (20) ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಆಕೆಯ ಪತಿ ಅಬಿದ್ (35) ಮತ್ತು ಸಂಬಂಧಿ ರಹಮತ್ (48) ಕೂಡ ಪ್ರಾಣ ಕಳೆದುಕೊಂಡಿದ್ದಾರೆ .
'ಪ್ರಾಥಮಿಕ ವರದಿಗಳ ಪ್ರಕಾರ, ಆಂಬ್ಯುಲೆನ್ಸ್ನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಯಿತು. ಆಂಬ್ಯುಲೆನ್ಸ್ನಲ್ಲಿದ್ದ ಇತರ ಮೂವರು ಗಾಯಗೊಂಡಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಚಾಲಕ ಶುಹೈಬ್ (29), ಫಾರಿಸ್ (20) ಮತ್ತು ಸಾದಿಕ್ (21) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದಿದ್ದಾರೆ.