ನ್ಯೂಸ್

ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!

ನವದೆಹಲಿ: ಈಕೆ ತನ್ನ ಊರಿನವರ ನಿದ್ರೆಯನ್ನೇ ಕೆಡಿಸಿದ ಮಹಿಳೆ ಎಂದರೂ ತಪ್ಪೇನಲ್ಲ. ಅಷ್ಟಕ್ಕೂ ನಲವತ್ತು ವರ್ಷಗಳಿಂದ ನಾನು ನಿದ್ರೆಯನ್ನೇ ಮಾಡಿಲ್ಲ ಎನ್ನುವ ಇವಳ ಮಾತು ವೈದ್ಯರನ್ನೂ ಅಚ್ಚರಿಗೀಡು ಮಾಡಿದೆ. ಮಾತ್ರವಲ್ಲ, ಹೆಂಡತಿ ನಿದ್ರಿಸಿದ್ದನ್ನೇ ನೋಡಿಲ್ಲ ಎಂದು ಗಂಡ ಕೂಡ ಹೇಳಿಕೊಂಡಿದ್ದಾನೆ.

ನಿದ್ರಾಹೀನತೆಯಿಂದ ಬಳಲುತ್ತಿರುವ ಈಕೆ ಇತ್ತೀಚೆಗೆ ಪರಿಣತ ವೈದ್ಯರನ್ನು ಭೇಟಿಯಾಗಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ. ನಾನು ನಲವತ್ತು ವರ್ಷಗಳಿಂದ ನಿದ್ರೆ ಮಾಡಿಲ್ಲ. ನನಗೆ ನೆನಪಿರುವ ಪ್ರಕಾರ ನಾನು ಐದು ವರ್ಷದವಳಾಗಿದ್ದಾಗ ಮಲಗಿದ್ದೇ ಕೊನೆ, ಆ ನಂತರ ನಾನು ನಿದ್ರಿಸಿಲ್ಲ ಎಂದು ಈಕೆ ಹೇಳಿಕೊಂಡಿದ್ದಾಳೆ.

ಈಕೆ ಹೇಳುತ್ತಿರುವುದು ಸುಳ್ಳಿರಬಹುದು ಎಂದು ಮೊದಮೊದಲು ಭಾವಿಸಿದ್ದ ಸ್ಥಳೀಯರು ಪರೀಕ್ಷಿಸಲೆಂದೇ ರಾತ್ರಿಯಲ್ಲಿ ಈಕೆಯ ಜತೆ ಕಾಲಹರಣ ಮಾಡುತ್ತಿದ್ದರು. ಕಾರ್ಡ್ಸ್​ ಇತ್ಯಾದಿ ಆಟದಲ್ಲಿ ಜನರು ಈಕೆಯನ್ನು ಪರೀಕ್ಷಿಸಲು ನೋಡಿ ತಾವೇ ನಿದ್ದೆ ಹೋಗಿದ್ದಿದೆ ಹೊರತು ಈಕೆ ನಿದ್ರಿಸಿದ್ದನ್ನು ಯಾರಿಗೂ ನೋಡಲು ಆಗಿಲ್ಲ. ಪಾಳಿಯ ಹಾಗೆ ಜನರು ಈಕೆಯೊಂದಿಗೆ ರಾತ್ರಿಯ ಸಮಯ ಕಳೆದರೂ ಈಕೆ ನಿದ್ರಿಸಿದ್ದನ್ನು ಮಾತ್ರ ನೋಡಲು ಆಗಿಲ್ಲ. ನನ್ನ ಹೆಂಡತಿ ನಿದ್ರೆ ಮಾಡಿದ್ದನ್ನು ನಾನೂ ನೋಡಿಲ್ಲ, ನಿದ್ರೆ ಮಾತ್ರೆಗಳನ್ನು ತಂದುಕೊಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ಈಕೆಯ ಪತಿ ಕೂಡ ಹೇಳಿಕೊಂಡಿದ್ದಾನೆ. ರಾತ್ರಿ ನಿದ್ರೆ ಬರದಿದ್ದಾಗ ಪತ್ನಿ ಮನೆ ಸ್ವಚ್ಛಗೊಳಿಸುತ್ತಿರುತ್ತಾಳೆ ಎಂದು ಆತ ಹೇಳಿದ್ದಾನೆ.

ಈಕೆ ಹೇಳಿದ್ದನ್ನು ಪರಿಶೀಲಿಸಲು ವೈದ್ಯರು ಈಕೆಯನ್ನು ಬ್ರೇನ್​ವೇವ್​ ಮಾನಿಟರ್​ ಮೂಲಕ ಪರೀಕ್ಷಿಸಿದಾಗ ಈಕೆಯ ಕಣ್ಣು ಯಾವತ್ತೂ ಹತ್ತು ನಿಮಿಷಕ್ಕಿಂತ ಜಾಸ್ತಿ ಮುಚ್ಚಿರುವುದು ಕಂಡುಬಂದಿಲ್ಲ. ಹೀಗಾಗಿ ಈಕೆ ನಲ್ವತ್ತು ವರ್ಷಗಳಿಂದ ನಿದ್ರಿಸಿಲ್ಲ ಎಂಬುದರಲ್ಲಿ ಸತ್ಯಾಂಶವಿದೆ ಎಂದು ವೈದ್ಯರೂ ಅಭಿಪ್ರಾಯಪಟ್ಟಿದ್ದಾರೆ. ಆದರೆ ಅವರು ಇನ್ನೊಂದು ಅಂಶವನ್ನು ಗಮನಿಸಿದ್ದಾರೆ. ಈಕೆ ಆ ಹತ್ತು ನಿಮಿಷಗಳಲ್ಲಿ ನಿದ್ರೆಗೆ ಜಾರುತ್ತಾಳೆ. ಅಂದರೆ ನಿದ್ರೆಯಲ್ಲೇ ನಡೆಯುವವರ ಥರ ಈ ಹತ್ತು ನಿಮಿಷದಲ್ಲಿ ಈಕೆ ನಿದ್ರಾವಸ್ಥೆಯಲ್ಲಿದ್ದರೂ ಜಾಗೃತಾವಸ್ಥೆಯಲ್ಲಿರುವಂತೆ ಚಟುವಟಿಕೆಯಿಂದಿರುತ್ತಾಳೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಲಿ ಝಾನಿಂಗ್ ಎಂಬ ಹೆಸರಿನ ಈಕೆ ಪೂರ್ವ ಚೀನಾದ ಹೆನಾನ್ ಪ್ರಾಂತ್ಯದವಳು. (ಏಜೆನ್ಸೀಸ್)