ನ್ಯೂಸ್

ಈ ಭೂಮಿ ನಿಜಾಮರಿಗೆ ಸೇರಿದ್ದು, ಆ ಸಂಭಾಜಿ ಮಹಾರಾಜ.... Election ಪ್ರಚಾರದ ವೇಳೆ ಮುಸ್ಲಿಂ ಮಹಿಳೆಯ ಹೇಳಿಕೆ ವೈರಲ್​

ಮುಂಬೈ: 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ (Maharashtra Assembly Election) ನವೆಂಬರ್​ 20ರಂದು ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರಾಜಕೀಯ ಹೈಡ್ರಾಮಾ ಜೋರಾಗಿದೆ ಎಂದರೆ ತಪ್ಪಾಗಲಾರದು. ಚುನಾವಣೆ (Election) ಸಮಯದಲ್ಲಿ ನಾವು ನೋಡಿದಂತೆ ಸಾಮಾನ್ಯವಾಗಿ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷದ ನಾಯಕರು ಮತದಾರರ ಗಮನ ಸೆಳೆಯಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕುತ್ತಾರೆ. ಇದೀಗ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ನೀಡಿರುವ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ AIMIM ಪಕ್ಷದಿಂದ 16 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಇವರ ಪರ ಅಸಾದುದ್ದೀನ್​ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್​ ಓವೈಸಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಅಕ್ಬರುದ್ದೀನ್​ ಓವೈಸಿ ನಡೆಸುತ್ತಿದ್ದ ಪ್ರಚಾರ ಸಭೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು (Muslim Women) ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದ್ದು, ಮಹಿಳೆಯ ಈ ಹೇಳಿಕೆಗೆ ನೆಟ್ಟಿಗರು ಫುಲ್‌ ಗರಂ ಆಗಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ AIMIM ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಮಹಿಳೆಯೊಬ್ಬರು, ಔರಂಗಬಾದ್‌ ನಗರ ಇದರ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಲು ನೀವ್ಯಾರು. ಆ ಸಂಭಾಜಿ ಮಹಾರಾಜರು ಯಾರು. ಈ ಭೂಮಿ ನಿಜಾಮರಿಗೆ ಸೇರಿದ್ದು,  ಬಂಜರು ನಗರವಾಗಿದ್ದ ಈ ಭೂಮಿಯನ್ನು ಅಭಿವೃದ್ಧಿ ಮಾಡಿದವರೇ ಮಲಿಕ್‌ ಅಂಬರ್.‌ ನೀವು ಇತಿಹಾಸವನ್ನು ಹೇಗೆ ಬದಲಾಯಿಸುತ್ತೀರಿ ಎಂದು ಹೇಳಿಕೆ ನೀಡಿದ್ದು, ಇದು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈವರೆಗೂ ಎರಡು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಇತ್ತ ಮಹಿಳೆಯ ಹೇಳಿಕೆಗೆ ನೆಟ್ಟಿಗರು ಕಿಡಿಕಾರಿದ್ದು, ಈ ಭೂಮಿ ಹಿಂದೂಸ್ಥಾನಕ್ಕೆ ಸೇರಿದ್ದು ಎಂಬ ಇತಿಹಾಸವನ್ನು ಮೊದಲು ಈಕೆ ತಿಳಿಯಲಿ. ಮುಖ ತೋರಿಸದೆ ಈ ರೀತಿ ಹೇಳಿಕೆ ಕೊಡುವುದು ಸರಿ ಹೋಗುವುದಿಲ್ಲ. ನಮ್ಮಲ್ಲಿ ಔರಂಗಬಾದ್‌ ಎಂದು ಕರೆಯಲ್ಪಡುವ ಯಾವುದೇ ನಗರವಿಲ್ಲ ಎಂದು ಕಮೆಂಟ್​ ಹಾಕಿ ಕಿಡಿಕಾರಿದ್ದಾರೆ.