ನ್ಯೂಸ್

ರಾತ್ರಿ ಬೆಡ್​ರೂಮ್​ನಲ್ಲಿನ ಈ ಕೆಟ್ಟ ಅಭ್ಯಾಸ ವೈವಾಹಿಕ ಸಂಬಂಧವನ್ನೇ ಮುರಿಯಬಹುದು ಎಚ್ಚರ!

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹಿರಿಯರು ಹೇಳ್ತಾರೆ. ಆದ್ರೆ ಇಂದು ಬೆಡ್​ರೂಮ್​ನಲ್ಲೇ ಗಂಡ-ಹೆಂಡಿರ ಜಗಳ ಶುರುವಾಗುತ್ತಿದೆ. ಹೀಗಾಗಿ ಬೆಡ್​ರೂಮ್​ನಲ್ಲಿ ದಂಪತಿ ಗಮನ ಹರಿಸಬೇಕಾದ ಪ್ರಮುಖ ವಿಷಯಗಳಿವೆ. ಇವುಗಳನ್ನು ನಿರ್ಲಕ್ಷಿಸುವುದರಿಂದ ದಾಂಪತ್ಯವೇ ಮುರಿದು ಬೀಳಬಹುದು. ಹಾಸಿಗೆಯ ಮೇಲೆ ವ್ಯಕ್ತಿಯು ತನ್ನೆಲ್ಲ ಒತ್ತಡಗಳನ್ನು ಮರೆತುಬಿಡುತ್ತಾನೆ. ಆದರೆ, ಇಂದಿನ ಆಧುನಿಕ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಬೆಡ್​ರೂಮ್​ನ ವಿಲನ್‌ಗಳಾಗಿವೆ. ಹಾಸಿಗೆಯಲ್ಲಿ ಫೋನ್ ಬಳಸುವ ಅಭ್ಯಾಸವು ಯುವ ಜೋಡಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎನ್ನುತ್ತಾರೆ ತಜ್ಞರು.

ರಾತ್ರಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವ ಬದಲು, ಸ್ಮಾರ್ಟ್‌ಫೋನ್‌ ಬಳಸುವುದರಿಂದ ನಿಮ್ಮ ಮತ್ತು ಸಂಗಾತಿ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಬಹುದು ಎಂದು ಅಧ್ಯಯನಗಳು ಎಚ್ಚರಿಸಿವೆ. ರಾತ್ರಿ ಮಲಗಿದ ನಂತರ ಸಂಗಾತಿ ಜತೆ ಮಾತನಾಡುವ ಬದಲು ಸ್ಮಾರ್ಟ್‌ಫೋನ್ ಬಳಸುವುದನ್ನು ಪ್ಯಾರಲೆಲ್​ ಸ್ಕ್ರೋಲಿಂಗ್ ಎಂದು ಕರೆಯಲಾಗುತ್ತದೆ.

ಈ ಪ್ಯಾರಲೆಲ್​ ಸ್ಕ್ರೋಲಿಂಗ್​ನಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ಮತ್ತು ಕಳೆಯಲು ನಿಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತೀರಿ. ಮಲಗಿರುವಾಗ ಫೋನನ್ನು ನೋಡುವುದು, ಒಬ್ಬರಿಗೊಬ್ಬರು ಮಾತನಾಡದೇ ಇರುವುದು ಮತ್ತು ಸುಸ್ತಾದಾಗ ಫೋನ್​ ಅನ್ನು ಪಕ್ಕಕ್ಕೆ ಇಟ್ಟು ಮಲಗುವುದು ದಂಪತಿಯ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ.

ಇದೇ ರೀತಿ ರಾತ್ರಿ ಬೆಡ್‌ನಲ್ಲಿ ಫೋನ್ ಬಳಸುವುದು ಮುಂದುವರಿದರೆ ಮುಂದೊಂದು ದಿನ ಇದು ಅಪಾಯಕಾರಿ ಪರಿಸ್ಥಿತಿಯನ್ನು ತಲುಪುತ್ತದೆ. ಹೀಗಾಗಿ ಫೋನ್ ಬಳಸಲು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯಲು ಬೆಡ್​ರೂಮ್ ಅನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

ಇನ್ನೂ ಪತ್ನಿಯೊಂದಿಗೆ ಮಾತ್ರವಲ್ಲದೆ, ಕುಟುಂಬದ ಇತರೆ ಸದಸ್ಯರೊಂದಿಗೆ ಹೊಸ ಪೀಳಿಗೆಯ ಸಂಬಂಧವು ಮೊದಲಿನಷ್ಟು ಗಟ್ಟಿಯಾಗಿಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ. ಇಲ್ಲಿ ಮತ್ತೆ ವಿಲನ್ ಆಗಿದ್ದು ಮಾತ್ರ ಸ್ಮಾರ್ಟ್ ಫೋನ್ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಬೆಡ್​ರೂಮ್​ನಲ್ಲಿ ಫೋನ್​ಗೆ ಗುಡ್​ ಬೈ ಹೇಳಿ ಸಂಗಾತಿ ಜತೆ ಸಮಯ ಕಳೆಯುವುದರಿಂದ ಸಂಬಂಧ ಗಟ್ಟಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. (ಏಜೆನ್ಸೀಸ್)