ಮುಂಬೈ: ಅನೇಕ ಸೆಲೆಬ್ರಿಟಿಗಳು ತಾವು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಒಳ್ಳೆಯ ದಿನಗಳು ಹತ್ತಿರವಾದಂತೆ ಸ್ವಂತ ನಿವಾಸ ಖರೀದಿ ಮಾಡುವ ಮೂಲಕ ಜೀವನಶೈಲಿಯನ್ನು ಬದಲಿಸಿಕೊಳ್ಳುತ್ತಾರೆ. ಅದೃಷ್ಟ ಖುಲಾಯಿಸಿದರೆ ಯಾರಿಗೆ, ಯಾವಾಗ? ಹೇಗೆ? ಏನೆಲ್ಲಾ ಒಲಿದು ಬರುತ್ತದೆ ಎಂಬುದು ನಿಜಕ್ಕೂ ಊಹಿಸಲು ಅಸಾಧ್ಯ. ಅಂತಹ ನಿದರ್ಶನಗಳು ಇಂದು ನಮ್ಮ ಮುಂದೆ ಹಲವಾರಿದೆ. ಆದರೆ, ಈ ಖ್ಯಾತ ನಟ ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡರೂ ಸಹ ಬರೋಬ್ಬರಿ 33 ವರ್ಷಗಳ ಕಾಲ ವಠಾರದಲ್ಲಿ ವಾಸ ಮಾಡಿ, ಜೀವನ ತಳ್ಳಿದ್ದಾರೆ.
ತಮ್ಮ ಚೊಚ್ಚಲ ಸಿನಿಮಾದಲ್ಲಿ ಹೆಸರು ಗಳಿಸಿದ ಈ ನಟ ಪ್ರೇಕ್ಷಕ ಫ್ರಭುಗಳಿಗೆ ಕೆಲವೇ ಕೆಲವು ಸಿನಿಮಾಗಳಿಂದ ಬಹಳ ಚಿರಪರಿಚಿತರಾದರು. ಸಿನಿರಂಗದಲ್ಲಿ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕರೂ ಮನೆಯ ಕಷ್ಟಗಳು ಮಾತ್ರ ಅವರನ್ನು ಬೆಂಬಿಡದೆ ಕಾಡಿದ್ದು ಮಾತ್ರ ಮರೆಯಲಾಗದ ನೆನಪು. ಅಪಾರ ಅಭಿಮಾನಿಗಳನ್ನು ಸಂಪಾದಿಸಿದರೂ ಕೂಡ ವಠಾರದಲ್ಲಿ ವಾಸ ಮಾಡುತ್ತಿದ್ದ ಇವರು, ತಮ್ಮ ಮುಂದಿನ ಸಿನಿಮಾಗಳ ಮಾತುಕತೆಗಾಗಿ ಮನೆಗೆ ಬರುತ್ತಿದ್ದ ನಿರ್ದೇಶಕ-ನಿರ್ಮಾಪಕರಿಗೆ ಚಿಕ್ಕ ಜಾಗದಲ್ಲೇ ಕುರ್ಚಿ ಹಾಕಿ ವ್ಯವಹರಿಸುತ್ತಿದ್ದರು.
ಅಷ್ಟಕ್ಕೂ ಯಾರು ಈ ನಟ? ಇವರ ಹಿನ್ನಲೆ ಏನು? ಯಾವ ಚಿತ್ರರಂಗದವರು? ಎಂಬ ಹಲವಾರು ಪ್ರಶ್ನೆಗಳಿಗೆ ಹೀಗಿದೆ ಉತ್ತರ. ನಾವು ಮಾತನಾಡುತ್ತಿರುವ ನಟ ಸುಭಾಷ್ ಘಾಯ್ ಅವರ ಚಿತ್ರದೊಂದಿಗೆ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿ, ಸತತ ಸೋಲುಗಳ ನಂತರ ಇಂದು ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದು, 212 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.
ಇವರು ಬೇರಾರು ಅಲ್ಲ ಬಾಲಿವುಡ್ನ ಸ್ಟಾರ್ ನಟ ಟೈಗರ್ ಶ್ರಾಫ್ ಅವರ ತಂದೆ ಜಾಕಿ ಶ್ರಾಫ್! ಮನರಂಜನಾ ಉದ್ಯಮಕ್ಕೆ ಬರುವ ಮೊದಲು ಜಾಕಿ ಮುಂಬೈನ ತೀನ್ ಬಟ್ಟಿಯಲ್ಲಿ ವಾಸಿಸುತ್ತಿದ್ದರು. ಬಾಲ್ಯದಲ್ಲಿ ತಮ್ಮ ಸ್ನೇಹಿತರಿಗಾಗಿ ಬೀದಿ ಬೀದಿಯಲ್ಲಿ ಜಗಳ ಮಾಡಿ, ಸ್ಥಳೀಯರಿಂದ ಭಾರೀ ಹೊಡೆತ ತಿಂದವರು. ತಮ್ಮ ಒದ್ದಾಟದ ದಿನಗಳನ್ನು ಮೆಲುಕು ಹಾಕಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ, "ಹೊಟ್ಟೆಪಾಡಿಗಾಗಿ ಅಂದು ಬಸ್ ನಿಲ್ದಾಣದಲ್ಲಿ ಕಡಲೆಕಾಯಿ ಮಾರಾಟ ಮಾಡ್ತಿದ್ದೆ, ಅದರಿಂದ ಬಂದ ಸಂಪಾದನೆಯಲ್ಲಿ ಹಬ್ಬದ ವೇಳೆ ಜಲೇಬಿ ತಿನ್ನಲು ಬಳಸಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.
1983ರಲ್ಲಿ ಸುಭಾಷ್ ಘಾಯ್ ಅವರ ಸೂಪರ್ಹಿಟ್ ಚಿತ್ರ 'ಹೀರೋ'ದಲ್ಲಿ ನಾಯಕನಾಗಿ ನಟಿಸುವ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟನಾಗಿ ಹೊರಹೊಮ್ಮಿದರು. ತದನಂತರ ಹಿಂತಿರುಗಿ ನೋಡದ ಜಾಕಿ, 'ಅಂದರ್ ಬಾಹರ್', 'ಜಾನೂ', 'ಯುದ್ಧ' ಮತ್ತು 'ಕರ್ಮ'ದಂತಹ ಹಲವಾರು ಸಿನಿಮಾಗಳನ್ನು ಮಾಡಿದರು. ಈ ಚಿತ್ರಗಳು ವ್ಯಾಪಕ ಯಶಸ್ಸು ಗಳಿಸುವುದರ ಜತೆಗೆ ನಟನಿಗೂ ಉತ್ತಮ ಹೆಸರು ತಂದುಕೊಟ್ಟಿತು. ಇಂದು ಅವರ ಪುತ್ರ ಟೈಗರ್ ಶ್ರಾಫ್ ಕೂಡ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, 'ಹೀರೋ ಪಂಥಿ'ಯಾಗಿ ಮಿಂಚಿದ್ದಾರೆ.
ಚಿತ್ರರಂಗದಲ್ಲಿ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಜಾಕಿ ಶ್ರಾಫ್, ಇಲ್ಲಿಯವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ, 212 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ ಆಸ್ತಿಯ ಒಡೆಯರಾಗಿದ್ದು, ಮುಂಬೈನಲ್ಲಿ 8 ಬಿಎಚ್ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅದ್ದೂರಿ ಕಾರುಗಳನ್ನು ಹೊಂದಿರುವ ಜಾಕಿ ಶ್ರಾಫ್ ಇಂದು ಐಷಾರಾಮಿ ಜೀವನಶೈಲಿ ನಡೆಸುತ್ತಿದ್ದಾರೆ,(ಏಜೆನ್ಸೀಸ್).