ದೇಶಕ್ಕೆ ಮಾದರಿಯಾದ ನಾಡಿನ ಮಠಗಳು ಉದ್ಯಮಿ ಡಾ.ವಿಜಯ ಸಂಕೇಶ್ವರ ಹೇಳಿಕೆ

IMG_20240202_171116_5@317019099
Published on

ರಾಮನಗರ

ಕರ್ನಾಟಕದ ಮಠ ಮಾನ್ಯಗಳು ಅಕ್ಷರ ಮತ್ತು ಅನ್ನ ದಾಸೋಹಕ್ಕೆ ಹೆಚ್ಚು ಮನ್ನಣೆ ನೀಡುವ ಮೂಲಕ ದೇಶದ ಎಲ್ಲ ಮಠಗಳಿಗೆ ಮಾದರಿಯಾಗಿವೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಉದ್ಯಮಿ ಡಾ.ವಿಜಯ ಸಂಕೇಶ್ವರ ಹೇಳಿದರು.

ಕನಕಪುರ ತಾಲೂಕು ಮರಳೇಗವಿ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶೀವೈಕ್ಯ ಶ್ರೀ ಕಾಲಾಗ್ನಿ ರುದ್ರಮುನಿ ಮಹಾಸ್ವಾಮೀಜಿ ಸಂಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದರು.

ದೇಶದ ಉದ್ಯಮ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಯಾವುದೇ ಕ್ಷೇತ್ರದಲ್ಲಿ ಸಾಧಕರಾಗಿರುವವರು ಮಠ ಮಾನ್ಯಗಳಲ್ಲಿ ಕಲಿತವರೇ ಆಗಿದ್ದಾರೆ. ಸಿದ್ಧಗಂಗಾಮಠ, ಸುತ್ತೂರು ಮಠ, ಆದಿಚುಂಚನಗಿರಿ ಮಠ ಹೀಗೆ ಬಹುತೇಕ ಎಲ್ಲ ಕ್ಷೇತ್ರಗಳು ಶಿಕ್ಷಣ ಮತ್ತು ದಾಸೋಹಕ್ಕೆ ಹೆಚ್ಚು ಒತ್ತು ನೀಡುತ್ತ ಬಂದಿವೆ. ಇದರಿಂದಾಗಿ ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಬೆಳೆದು ನಿಂತಿದೆ. ಇದರ ಹಿಂದೆ ಖಾವಿಧಾರಿಗಳ ಸೇವೆ ಅವಿಸ್ಮರಣೀಯ ಎಂದು ಅಭಿಪ್ರಾಯಪಟ್ಟರು.

ಬಾರ್ಕೂರು ಮಠದ ಶ್ರೀ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರು ಮಾತನಾಡಿ, ಸಾಧಕರಲ್ಲಿ ಹೆಚ್ಚಿನವರು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಬಂದವರಲ್ಲ. ಹಲವು ಪರೀಕ್ಷೆಗಳನ್ನು ದಾಟಿದ ಮೇಲೆಯೇ ದೇವರು ಎತ್ತಿ ಹಿಡಿಯುತ್ತಾನೆ. ಇದಕ್ಕೆ ಸಂಕೇಶ್ವರ ಅವರೇ ಸಾಕ್ಷಿ. ಅವರು ಸಾಧನೆ ಹಾದಿಯನ್ನು ಸಾಕಷ್ಟು ಸವೆಸಿದ್ದಾರೆ. ಶೂನ್ಯದಿಂದ ಎಲ್ಲವನ್ನೂ ಪಡೆದಿದ್ದರೂ ಅವರು ತುಂಬಿದ ಕೊಡದಂತೆ ಇದ್ದಾರೆ ಎಂದರು.

ಹಣವಂತರು, ಹೆಚ್ಚಿನ ಬಂಧುಗಳನ್ನು ಹೊಂದಿರುವವರು, ಕರ್ಮಯೋಗಿಗಳು, ಜ್ಞಾನವಂತರು ಮತ್ತು ಹಿರಿಯರನ್ನು ಗೌರವಿಸುವ ಕೆಲಸ ಮಾಡಿದರೆ ದೇವರಿಗೆ ನಮಸ್ಕಾರ ಮಾಡಿದಂತೆ. ಈ ನಿಟ್ಟಿನಲ್ಲಿ ಮಕ್ಕಳು ಉತ್ತಮ ಮಾರ್ಗದಲ್ಲಿ ನಡೆಯಬೇಕು. ದೇಶದಲ್ಲಿ ರಾಮಾಯಣ ಮತ್ತು ಮಹಾಭಾರತ, ರಾಮ ಹಾಗೂ ಕೃಷ್ಣ ಇಬ್ಬರೂ ಎಂದಿಗೂ ಪ್ರಸ್ತುತ, ಅವರನ್ನು ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು.

ಮರಳೆಗವಿ ಮಠದ ಡಾ.ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ವಿಜಯದೇವ್, ಬಾಲ ಪ್ರತಿಭೆ ಮಾನ್ಯ ಪಾಟೀಲ್, ಉದ್ಯಮಿ ಮೊಹ್ಲಿವಾನ್ ಇದ್ದರು.

ಕಳ್ಳಿಪುರ ಮಹದೇವ ಸ್ವಾಮಿ ಭಜನೆ ಮೂಲಕ ಪ್ರಾರ್ಥಿಸಿದರೆ, ಪ್ರಾಂಶುಪಾಲ ಪ್ರಭುಸ್ವಾಮಿ ಸ್ವಾಗತಿಸಿದರು. ಆಕಾಶವಾಣಿ ಕಲಾವಿದೆ ಸವಿತಾ ಶಿವಕುಮಾರ್ ನಿರೂಪಣೆ ಮಾಡಿದರು.  ಇದೇ ವೇಳೆ ಸಾಧಕ ಮಕ್ಕಳನ್ನು ಡಾ. ವಿಜಯ ಸಂಕೇಶ್ವರ, ವಿವಿಧ ಸ್ವಾಮೀಜಿಗಳು ಮತ್ತು ಗಣ್ಯರು ಸನ್ಮಾನಿಸಿದರು.

ಪೂಜೆಯಿಂದ ಭಾಗ್ಯ ಬಾರದು

ಪೂಜೆ ಮಾಡಿ ಭಾಗ್ಯವನ್ನು ಬೇಡಿದರೆ, ಇಲ್ಲ ಸಿದ್ದರಾಮಯ್ಯ ಅವರ ಭಾಗ್ಯಗಳನ್ನು ಕಾಯುತ್ತಾ ಕುಳಿತರೆ ಜೀವನ ಸಾಗುವುದಿಲ್ಲ. ಕಾಯಕ ತತ್ವವನ್ನು ಮೈಗೂಡಿಸಿಕೊಂಡು ಬಂದರೆ ಖಂಡಿತವಾಗಿ ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಎಂದು ಡಾ. ವಿಜಯ ಸಂಕೇಶ್ವರ ಅವರು ಕಿವಿ ಮಾತು ಹೇಳಿದರು. ನಾನು ಸಹ ಕೊನೆ ಬೆಂಚಿನ ವಿದ್ಯಾರ್ಥಿಯಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣಗೊಂಡವನೇ. ಆದರೆ ಕಾಯಕ ನಿಷ್ಠೆಯಲ್ಲಿ ತೊಡಗಿದ ಪರಿಣಾಮ ಎಲ್ಲವೂ ಸಾಧ್ಯವಾಯಿತು. ಕಳೆದ 58 ವರ್ಷಗಳಿಂದಲೂ ಒಂದೂ ರಜೆಯನ್ನು ತೆಗೆದುಕೊಳ್ಳದೆ ಕಾಯಕ ನಿಷ್ಠೆಯಲ್ಲಿ ಜೀವನ ಕಂಡುಕೊಂಡಿದ್ದೇನೆ ಎಂದರು. ಅಲ್ಲದೆ, ಮಕ್ಕಳಿಗೆ ಕಾಯಕ ನಿಷ್ಠೆಯನ್ನು ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಪದ್ಮಶ್ರೀ ನನ್ನಿಂದ ಬಂದಿದ್ದಲ್ಲ

ಪದ್ಮಶ್ರೀ ಪ್ರಶಸ್ತಿ ನನ್ನಿಂದಾಗಿ ಬಂದಿದ್ದಲ್ಲ, ಇದು ನನ್ನ ಸಂಸ್ಥೆಯಲ್ಲಿ ಶ್ರದ್ಧೆಯಿಂದ ದುಡಿಯುವ ಕಾರ್ಮಿಕರಿಂದಾಗಿ ನನಗೆ ಲಭಿಸಿದೆ. ಸಾರಿಗೆ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಯಾವಾಗಲೂ ಸಮಸ್ಯೆಗಳು ಇದ್ದೇ ಇರುತ್ತವೆ. ಇದರ ಹೊರತಾಗಿಯೂ ಕಾಯಕ ಮನಸ್ಥಿತಿ ನನ್ನನ್ನು ನೆಮ್ಮದಿಯಾಗಿರಿಸಿದೆ ಎಂದು ಡಾ. ವಿಜಯಸಂಕೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net