ನ್ಯೂಸ್

ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರು: 32 ಕನ್ನಡಿಗ ವಿದ್ಯಾರ್ಥಿಗಳು ಗೈರು

ಕಾಸರಗೋಡು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಸ್‌ಎಸ್‌ಎಲ್‌ಸಿ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಮಂಗಳವಾರ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನಗಳೊಂದಿಗೆ ಆರಂಭಗೊಂಡವು.

ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಹೊರಗೆ ಸ್ಯಾನಿಟೈಸರ್ ಬಳಸಿದ ನಂತರ, ದೇಹದ ಉಷ್ಣತೆ ಪರಿಶೋಧಿಸಿ ಕೊಠಡಿಯೊಳಗೆ ಬಿಡಲಾಯಿತು. ಸಾಮಾಜಿಕ ಅಂತರ ಪಾಲನೆಯೊಂದಿಗೆ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕುಳ್ಳಿರಿಸಲಾಗಿತ್ತು. ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು.

ಕರ್ನಾಟಕದಲ್ಲಿ ಕ್ವಾರಂಟೈನ್ ಹೊಂದಿದ ಮನೆಗಳಿಂದ ಆಗಮಿಸಿದವರನ್ನು ಕೊಠಡಿಯೊಳಗೆ ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ನಡೆಸಲಾಯಿತು. ನಂತರ ಇವರನ್ನು ಅವರ ಮನೆ, ಹಾಸ್ಟೆಲ್ ಅಥವಾ ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸುವ ವ್ಯವಸ್ಥೆ ಮಾಡಲಾಯಿತು.

ಕರ್ನಾಟಕದಿಂದ (ಗಡಿ ಊರುಗಳಿಂದ) ಆಗಮಿಸಬೇಕಾಗಿದ್ದ 32 ಮಂದಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನದವರೆಗೆ ಎಸ್ಸೆಸ್ಸೆಲ್ಸಿ ಹಾಗೂ ಹೈಯರ್ ಸೆಕೆಂಡರಿಯ 246 ಮಂದಿ ವಿದ್ಯಾರ್ಥಿಗಳು ಕರ್ನಾಟಕದಿಂದ ತಲಪಾಡಿ ಗಡಿ ಮೂಲಕ ಜಿಲ್ಲೆಗೆ ಆಗಮಿಸಿದ್ದರು. ಮೇ 30ರವರೆಗೆ ಈ ಪರೀಕ್ಷೆಗಳು ನಡೆಯಲಿವೆ.