ನ್ಯೂಸ್

ಕಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೆಲವು ಚಿತ್ರಗಳಲ್ಲಿರುವ ವಸ್ತು ಅಥವಾ ಪ್ರಾಣಿಗಳನ್ನು ಕೆಲವೊಮ್ಮೆ ಸುಲಭವಾಗಿ ಗುರುತಿಸಬಹುದು. ಇನ್ನು ಕೆಲವೊಮ್ಮೆ ಗುರುತಿಸಲು ಪರದಾಡಿ ತಲೆ ಕೆರೆದುಕೊಳ್ಳುವ ಪರಿಸ್ಥಿತಿಯು ಎದುರಾಗಬಹುದು. ಆದರೂ ಪಜಲ್​ ಮಾತ್ರ ಒಳ್ಳೆಯ ಟೈಂಪಾಸ್​ ಗೇಮ್​ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇದೀಗ ಅಮೆರಿಕದ ರಿಯಾ ಮೊರ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣೆ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಜಿಂಕೆ ಬೇಟೆಗೆ ಹೊಂಚು ಹಾಕಿ ಕುಳಿತಿರುವ ಪರ್ವತ ಸಿಂಹದ ಫೋಟೋವನ್ನು ಪೋಸ್ಟ್​ ಮಾಡಲಾಗಿದೆ. ಟ್ವಿಸ್ಟ್ ಏನೆಂದರೆ​ ಪೋಟೋವಿನ ನೇರ ದೃಶ್ಯದಲ್ಲಿ ಸಿಂಹವನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವೇನಲ್ಲ. ಸೂಕ್ಷ್ಮ ಕಣ್ಣಿನಿಂದ ನೋಡಿದಾಗಲೇ ಸಿಂಹ ಎಲ್ಲಿ ಅಡಗಿ ಕುಳಿತಿದೆ ಎಂಬುದು ಗೊತ್ತಾಗುವುದು.

ಅಂದಹಾಗೆ ಈ ಚಿತ್ರವನ್ನು 2019ರ ಅಕ್ಟೋಬರ್​ನಲ್ಲಿ ತೆಗೆಯಲಾಯಿತು. ಅರೋಯೋಗಳನ್ನು ಮರುಸ್ಥಾಪಿಸಿ ಯಶಸ್ಸನ್ನು ನೋಡುವ ಮೇಲ್ವಿಚಾರಣಾ ಯೋಜನೆಯ ಭಾಗವಾಗಿ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ. ಇದೀಗ ರಿಯಾ ಮೊರ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕೇಂದ್ರವು ಮತ್ತೊಮ್ಮೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಫೋಟೋ ಪೋಸ್ಟ್​ ಮಾಡಿ ಪರ್ವತ ಸಿಂಹವನ್ನು ಪತ್ತೆ ಹಚ್ಚುವಂತೆ ಸವಾಲು ಎಸೆದಿದೆ.

ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 10 ಸಾವಿರಕ್ಕೂ ಅಧಿಕ ಬಾರಿ ಶೇರ್​ ಆಗಿದೆ. ಸಾವಿರಾರು ಲೈಕ್ಸ್​ಗಳು ಹರಿದುಬಂದಿದ್ದು, ಅನೇಕ ನೆಟ್ಟಿಗರು ಬೆಟ್ಟದ ಸಿಂಹವನ್ನು ಪತ್ತೆ ಹಚ್ಚಿ ಕಾಮೆಂಟ್​ ಮಾಡುವಲ್ಲಿ ನಿರತರಾಗಿದ್ದಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ, ಪತ್ತೆ ಹಚ್ಚಿದ್ರೆ ಕಮೆಂಟ್​ ಮಾಡುವುದನ್ನು ಮರೆಯಬೇಡಿ. (ಏಜೆನ್ಸೀಸ್​)