ನ್ಯೂಸ್

ಪಾಲಕರ ಇಚ್ಛೆ ವಿರುದ್ಧವಾಗಿ ಮದುವೆಯಾದವರಿಗೆ ರಕ್ಷಣೆ ಇಲ್ಲ; Allahabad High Court ಅಭಿಪ್ರಾಯ​

Allahabad High Court : ತಮ್ಮ ಹೆತ್ತವರ ಇಚ್ಛೆ ವಿರುದ್ಧವಾಗಿ ಸ್ವಇಚ್ಛೆಯಂತೆ ಮದುವೆಯಾಗುವ ದಂಪತಿಗಳಿಗೆ ಬೆದರಿಕೆಯ ಗ್ರಹಿಕೆ ಇಲ್ಲದಿದ್ದವರಿಗೆ ರಕ್ಷಣೆ ಒದಗಿಸಲಾರದು ಎಂದು ಅಲಹಾಬಾದ್​ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಜೀವ ಬೆದರಿಕೆ ಹಾಗೂ ತಮ್ಮ ಸ್ವಾತಂತ್ರ್ಯಕ್ಕೆ ನಿಜವಾಗಿಯೂ ಬೆದರಿಕೆ ಇರುವವರಿಗೆ ಪೊಲೀಸ್​ ಮತ್ತು ಕೋರ್ಟ್​ ರಕ್ಷಣೆ ಒದಗಿಸುತ್ತದೆ. ಆದರೆ, ಅದು ಹಕ್ಕು ಅಲ್ಲ ಎಂದಿದೆ.

ಅರ್ಹ ಪ್ರಕರಣದಲ್ಲಿ ದಂಪತಿಗಳಿಗೆ ನ್ಯಾಯಾಲಯ ಭದ್ರತೆ ಒದಗಿಸಬಹುದು. ಆದರೆ, ಯಾವುದೇ ಬೆದರಿಕೆ ಗ್ರಹಿಕೆ ಇಲ್ಲದಿದ್ದಾಗ, ಅಂತಹ ದಂಪತಿಗಳು "ಪರಸ್ಪರ ಬೆಂಬಲಿಸಲು ಮತ್ತು ಸಮಾಜವನ್ನು ಎದುರಿಸಲು ಕಲಿಯಬೇಕು" ಎಂದು ಕೋರ್ಟ್​ ಹೇಳಿದೆ.

ಪೊಲೀಸ್ ರಕ್ಷಣೆ ಮತ್ತು ಖಾಸಗಿ ಪ್ರತಿವಾದಿಗಳು ತಮ್ಮ ಶಾಂತಿಯುತ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ಕೋರಿ ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಅರ್ಜಿಯಲ್ಲಿನ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಅರ್ಜಿದಾರರಿಗೆ ಯಾವುದೇ ಗಂಭೀರ ಬೆದರಿಕೆ ಗ್ರಹಿಕೆ ಇಲ್ಲ ಎಂದು ಗಮನಿಸಿ ಅವರ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಯಾವುದೇ ವ್ಯಕ್ತಿ ಅವರ ಮೇಲೆ ಕೆಟ್ಟದಾಗಿ ವರ್ತಿಸಿದರೆ ಅಥವಾ ದೌರ್ಜನ್ಯ ಎಸಗಿದರೆ, ನ್ಯಾಯಾಲಯಗಳು ಮತ್ತು ಪೊಲೀಸ್ ಅಧಿಕಾರಿಗಳು ಅವರ ರಕ್ಷಣೆಗೆ ಬರುತ್ತಾರೆ ಎಂದು ಕೋರ್ಟ್​ ಹೇಳಿದೆ.(ಏಜೆನ್ಸೀಸ್​)