ಬೆಂಗಳೂರು: ಕರ್ನಾಟಕ ಬಂದ್ ಘೋಷಣೆಯಿಂದ ಸಾರ್ವಜನಿಕರು, ಉದ್ಯಮಿಗಳು, ವರ್ತಕರಿಗೆಲ್ಲ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಂತಾಗಿದೆ. ಏಕೆಂದರೆ ಡಿ. 31ರಂದು ಕರ್ನಾಟಕ ಬಂದ್ ನಡೆಸುವುದಾಗಿ ಹೇಳಿದ್ದ ಕೆಲವು ಕನ್ನಡಪರ ಸಂಘಟನೆಗಳು ಇದೀಗ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿವೆ.
ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿದ್ದು, ನಾಳೆ ಕರ್ನಾಟಕ ಬಂದ್ ಇರುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಪರವಾಗಿ ಮತ್ತೊಮ್ಮೆ ದನಿ ಎತ್ತಿದ ರಾಜ್ಯಸಭಾ ಸದಸ್ಯ; ವಿಜಯವಾಣಿ ವರದಿ ಪ್ರಸ್ತಾಪಿಸಿ ಸಿಎಂ ಗಮನ ಸೆಳೆದ ಚಂದ್ರಶೇಖರ್
ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಪ್ರವೀಣ್ಕುಮಾರ್ ಶೆಟ್ಟಿ, ಸಾ.ರಾ.ಗೋವಿಂದು ಅವರು ಬಂದ್ಗೆ ಕರೆ ನೀಡಿದ್ದರು. ಬಂದ್ ನಡೆಸದಂತೆ ಅವರಲ್ಲಿ ಎರಡು ಸಲ ಮನವಿ ಮಾಡಿಕೊಳ್ಳಲಾಗಿತ್ತು. ಇಂದು ಅವರನ್ನು ಮತ್ತೆ ಕರೆದು ಮನವರಿಕೆ ಮಾಡಿಕೊಡಲಾಗಿದ್ದು, ಕೊನೆಗೂ ಅವರು ಬಂದ್ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಎಂಇಎಸ್ ಬಗ್ಗೆ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಹೀಗಾಗಿ ನಾಳೆ ಬಂದ್ ಇರುವುದಿಲ್ಲ. ಈಗಾಗಲೇ ಘೋಷಿಸಲಾಗಿರುವ ಬಂದ್ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.
ನಾಳೆ ಬಂದ್ ಬದಲಿಗೆ ಬೆಳಗ್ಗೆ 10.30ಕ್ಕೆ ಪುರಭವನದಿಂದ ಕೆಂಪೇಗೌಡ ಬಸ್ ನಿಲ್ದಾಣ, ಸ್ವಾತಂತ್ರ್ಯ ಉದ್ಯಾನದವರೆಗೆ ಕನ್ನಡಪರ ಸಂಘಟನೆಗಳಿಂದ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.