ನ್ಯೂಸ್

ಮಂದಿರ-ಮಸೀದಿ ವಿವಾದ ಕೆದಕಿ ನಾಯಕರಾಗುವ ಉದ್ದೇಶ ಬೇಡ! ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು

ನವದೆಹಲಿ: ಮಂದಿರ-ಮಸೀದಿ ವಿವಾದಗಳು ಮತ್ತೆ ಹುಟ್ಟಿಕೊಳ್ಳುತ್ತಿರುವುದಕ್ಕೆ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳವಳ ವ್ಯಕ್ತಪಡಿಸಿದ್ದು, ಅಯೋಧ್ಯೆ ರಾಮ ಮಂದಿರ ನಿರ್ವಣದ ನಂತರ ಇಂತಹ ಸಮಸ್ಯೆ ಗಳನ್ನು ಕೆದಕುವ ಮೂಲಕ ಕೆಲವು ವ್ಯಕ್ತಿಗಳು ಹಿಂದುಗಳ ನಾಯಕರಾಗಬಹುದು ಎಂದು ಭಾವಿಸಿದಂತಿದೆ ಎಂದು ಕಿಡಿಕಾರಿದ್ದಾರೆ.

ಪುಣೆಯ ಸಹಜೀವನ ವ್ಯಾಖ್ಯಾನ ಮಾಲಾ (ಉಪನ್ಯಾಸ ಮಾಲೆ)ಯಲ್ಲಿ ಭಾರತ ವಿಶ್ವಗುರು ಕುರಿತು ಉಪನ್ಯಾಸ ನೀಡಿದ ಭಾಗವತ್, ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕಾಗಿ ಪ್ರತಿಪಾದಿಸುತ್ತಾ ನಮ್ಮ ದೇಶದಲ್ಲಿ ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದು ಒತ್ತಿ ಹೇಳಿದರು. ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ತೋರಿಸಿದ ಭಾಗವತ್, ರಾಮಕೃಷ್ಣ ಮಿಷನ್​ನಲ್ಲಿ ಕ್ರಿಸ್​ವುಸ್ ಆಚರಿಸುತ್ತಾರೆ. ನಾವು ಹಿಂದೂಗಳಾಗಿರು ವುದರಿಂದ ಮಾತ್ರ ಇದನ್ನೆಲ್ಲಾ ಮಾಡಬಹುದಾಗಿದೆ. ಬಹಳ ಹಿಂದಿನಿಂದಲೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಈ ಸೌಹಾರ್ದತೆಯನ್ನು ಜಗತ್ತಿಗೆ ನೀಡಬೇಕಾದರೆ ಅದರ ಮಾದರಿಯನ್ನು ನಾವು ರಚಿಸಬೇಕಾಗಿದೆ. ರಾಮಮಂದಿರ ನಿರ್ವಣದ ನಂತರ, ಕೆಲವರು ಹಿಂದೂಗಳ ನಾಯಕರಾಗಬಹುದು ಎಂದು ಭಾವಿಸುತ್ತಿದ್ದಾರೆ. ಹೊಸ ಸ್ಥಳಗಳಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ತರುವುದು ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಮಸೀದಿಗಳ ಸಮೀಕ್ಷೆಗೆ ಹಲವು ಸಂಘಟನೆಗಳಿಂದ ಒತ್ತಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾಗವತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೆಲ ಕೇಸುಗಳೂ ಕೋರ್ಟ್ ಮೆಟ್ಟಿಲೇರಿವೆ. ಆದರೆ, ಭಾಗವತ್ ತಮ್ಮ ಉಪನ್ಯಾಸದಲ್ಲಿ ಅವ್ಯಾವುದನ್ನೂ ಹೆಸರಿಸದೆ, ಪರೋಕ್ಷ ಸಂದೇಶ ರವಾನೆ ಮಾಡುವ ಯತ್ನ ಮಾಡಿದಂತಿದೆ. ಅಯೋಧ್ಯೆ ಎಲ್ಲಾ ಹಿಂದೂ ಗಳ ನಂಬಿಕೆಯ ವಿಷಯವಾದ್ದರಿಂದ ಅಲ್ಲಿ ರಾಮಮಂದಿರ ವನ್ನು ನಿರ್ವಿುಸಲಾಗಿದೆ ಎಂದು ವಿವರಿಸಿದರು.

ನಾವೆಲ್ಲರೂ ಒಂದೇ...: ಈಗ ನಿತ್ಯವೂ ಹೊಸ ವಿವಾದ ಹುಟ್ಟಿಕೊಳ್ಳುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ? ಇದನ್ನೆಲ್ಲಾ ನಾವು ಮುಂದುವರಿಸಬಾರದು. ನಾವು ಒಟ್ಟಿಗೆ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕು ಎಂದು ಭಾಗವತ್ ಕರೆ ನೀಡಿದರು. ಭಾರತೀಯರು ತಮ್ಮ ಹಿಂದಿನ ತಪ್ಪುಗಳಿಂದ ಕಲಿಯಬೇಕು. ವಿವಾದಾತ್ಮಕ ಸಮಸ್ಯೆಗಳನ್ನು ತಪ್ಪಿಸುವ ಮೂಲಕ ಒಳಗೊಳ್ಳುವಿಕೆಯನ್ನು ಹೇಗೆ ಅಭ್ಯಾಸ ಮಾಡಬಹುದು ಎಂಬುದನ್ನು ತೋರಿಸಬೇಕು. ಉಗ್ರವಾದ, ಆಕ್ರಮಣಶೀಲತೆ, ಬಲವಂತಿಕೆ ಮತ್ತು ಇತರರ ದೇವರನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ. ಇಲ್ಲಿ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಎಂಬುದಿಲ್ಲ; ನಾವೆಲ್ಲರೂ ಒಂದೇ. ವಿಶ್ವಶಾಂತಿಯ ಬಗ್ಗೆ ದೊಡ್ಡ ದೊಡ್ಡ ಘೊಷಣೆಗಳನ್ನು ಮಾಡಲಾಗುತ್ತಿದೆ. ನಮಗೂ ವಿಶ್ವ ಶಾಂತಿಯ ಬಗ್ಗೆ ಸಲಹೆ ನೀಡಲಾಗುತ್ತಿದೆ. ಆದರೆ ಅದೇ ಸಮಯದಲ್ಲಿ, ಯುದ್ಧಗಳು ಮಾತ್ರ ನಿಲ್ಲುತ್ತಿಲ್ಲ. ನಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆ ಚಿಂತಿಸಬೇಕೆಂದು ಆಗಾಗ್ಗೆ ನಮ್ಮಲ್ಲಿ ತಿಳಿಸಲಾಗುತ್ತದೆ. ಅಲ್ಪಸಂಖ್ಯಾತರು ಹೊರಗೆ (ವಿದೇಶ) ಯಾವ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದನ್ನೂ ಗಮನಿಸಬೇಕಲ್ಲವೇ ಎಂದರು.

ಈ ದಾರಿ ಸರಿಯಲ್ಲ...: ನಾಯಕನಾಗುವುದೊಂದೇ ಗುರಿಯಾಗಿದ್ದರೆ, ಕೋಮು ಸಂಘರ್ಷಗಳು ಸರಿಯಲ್ಲ ಎಂದು ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆಗಳನ್ನು ಖಂಡಿಸಿ ಮೋಹನ್ ಭಾಗವತ್ ಮಾತನಾಡಿರುವ ಹಿನ್ನೆಲೆಯಲ್ಲಿ ಸತ್ಯೇಂದ್ರ ದಾಸ್ ಈ ಹೇಳಿಕೆ ನೀಡಿದ್ದಾರೆ. ದೇವಸ್ಥಾನ- ಮಸೀದಿಯ ಘರ್ಷಣೆ ಕೋಮು ಸಂಘರ್ಷವಾಗಿದೆ. ಅಂತಹ ಸಂಘರ್ಷಗಳು ಹೆಚ್ಚಾಗುತ್ತಿದ್ದಂತೆ, ಕೆಲವೇ ಜನರು ನಾಯಕರಾಗುತ್ತಿದ್ದಾರೆ. ನಾಯಕನಾಗುವುದೊಂದೇ ಗುರಿಯಾಗಿದ್ದರೆ, ಅಂತಹ ಸಂಘರ್ಷಗಳಿಗೆ ಅವಕಾಶ ಇರಕೂಡದು. ಕೇವಲ ನಾಯಕನಾಗಲು ಸಂಘರ್ಷ ಆರಂಭಿಸುವವರು ಸರಿಯಾದ ಹಾದಿಯಲ್ಲಿಲ್ಲ ಎಂದರ್ಥ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.