ನ್ಯೂಸ್

ರಾಮಮಂದಿರ ಉದ್ಘಾಟನೆ ಹಿಂದಿದೆ ಬೇರೆ ಪ್ಲ್ಯಾನ್; ನನ್ನ ಪ್ರಕರಣದಲ್ಲಿ ಕಾಸಿನ ಪ್ರಶ್ನೆಯೇ ಇಲ್ಲ: ಮಹುವಾ ಮೊಯಿತ್ರಾ

Ravikanth Kundapura

ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಿಲುಕಿಕೊಂಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ, ಲೋಕಸಭೆಯಿಂದ ಉಚ್ಚಾಟನೆಯಾಗುವ ಸಂದರ್ಭವನ್ನು ಎದುರಿಸುತ್ತಿದ್ದಾರೆ.

ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಸಿಲುಕಿರುವ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಬೇಕು ಎಂದು ಲೋಕಸಭಾ ನೈತಿಕ ಸಮಿತಿ ಶಿಫಾರಸು ಮಾಡಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಮಹುವಾ ಮೊಯಿತ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಗೌತಮ್ ಅದಾನಿ ವಿರುದ್ಧ ಮಾಡಿರುವ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಇವೆಲ್ಲವೂ ನಡೆಯುತ್ತಿದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಇನ್ನು ನನ್ನ ವಿರುದ್ಧ ನೀಡಲಾಗಿರುವ 500 ಪುಟಗಳ ವರದಿಯಲ್ಲಿ ಕಾಸಿನ ಬಗ್ಗೆ ಪ್ರಶ್ನೆಯೇ ಇಲ್ಲ. ಪ್ರಶ್ನೆ ಇರುವುದು ನಾವು ಪ್ರಶ್ನೆ ಮಾಡುತ್ತಿರುವ ಬಗ್ಗೆ ಎಂದರು.

ಕಲ್ಲಿದ್ದಲು ಹಗರಣವೇ ಮೋದಿ ಮತ್ತು ಅದಾನಿಗೆ ಮುಳುವಾಗುತ್ತಿರುವುದರಿಂದ ಅದರ ವಿರುದ್ಧ ನಾವು ದನಿ ಎತ್ತದಂತೆ ಹೀಗೆಲ್ಲ ಮಾಡಲಾಗುತ್ತಿದೆ. ಜ. 22ರ ವರೆಗೆ ನಮ್ಮೆಲ್ಲರ ಬಾಯಿ ಮುಚ್ಚಿಸಲು ಈ ತಂತ್ರಗಳನ್ನು ಮಾಡಲಾಗುತ್ತಿದೆ. ಜ. 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗುತ್ತದೆ. ಆ ಬಳಿಕ ಅದೇ ಜೋಶ್​ನಲ್ಲಿ ಬಿಜೆಪಿ ಇದನ್ನೆಲ್ಲ ಮರೆಮಾಚುತ್ತದೆ. ಇದು ಅವರ ಪ್ಲ್ಯಾನ್, ರಾಮ ಮಂದಿರ ಉದ್ಘಾಟನೆ ಮೂಲಕ ಇವನ್ನೆಲ್ಲ ಮುಚ್ಚಿ ಹಾಕಲಾಗುತ್ತದೆ ಎಂದು ಮೊಯಿತ್ರಾ ಹೇಳಿದ್ದಾರೆ.