ನ್ಯೂಸ್

ಅಜೀರ್ಣ ಆಗಲು ಕಾರಣಗಳು ಹಲವು!

ಮನೆಯಲ್ಲಿರುವ ಬೆಕ್ಕು ಕೆಲವೊಮ್ಮೆ ತಾನಾಡುವ ಬೇಟೆಯ ಪುಟ್ಟ ಜೀವಿಯನ್ನು ಆಸೆಯಿಂದ ಹಾಗೂ-ಹೀಗೂ ತಿಂದುಬಿಡುತ್ತದೆ. ಹೀಗೆ ತಿಂದಿರುವುದು ಪ್ರಮಾಣದಲ್ಲಿ ಅತಿಯಾಗಿದ್ದಾಗ ಅದು ಜೀರ್ಣವಾಗದೇ ಹೊಟ್ಟೆನೋವಿನಿಂದ ಒದ್ದಾಡಲು ಪ್ರಾರಂಭಿಸು ತ್ತದೆ. ಬೆಕ್ಕಿಗೆಲ್ಲಿಯ ವೈದ್ಯರಿದ್ದಾರೆ ಹೇಳಿ. ಮನೆಯ ಸುತ್ತಮುತ್ತ ಬೆಳೆದಿರುವ ಸಸ್ಯಗಳಲ್ಲಿ ಹುಡುಕಿ ಗರಿಕೆಹುಲ್ಲನ್ನು ಆರಿಸಿ ಕಷ್ಟಪಟ್ಟು ತಿನ್ನುತ್ತದೆ. ಇಷ್ಟಪಟ್ಟು ತಿನ್ನಲು ಅದೇನೂ ಸಸ್ಯಾಹಾರಿ ಅಲ್ಲವಲ್ಲ! ಹುಲ್ಲು ತಿಂದಾಗ ಅತಿಯಾಗಿ ತಿಂದಿರುವ ಆಹಾರವನ್ನು ದೇಹವು ವಾಂತಿಮಾಡಿ ಹೊರಗೆಸೆಯುತ್ತದೆ. ಅಜೀರ್ಣವಾದರೆ ಅದು ತೊಂದರೆ, ಹಾಗಾಗಿ ಅದರ ಪರಿಹಾರ ಹೇಗೆ ಎಂಬುದು ವೈದ್ಯನಲ್ಲದ ಬೆಕ್ಕಿಗೂ ಚೆನ್ನಾಗಿ ಗೊತ್ತಿದೆ! ದೇಸೀ

ಗೋವುಗಳಲ್ಲಿ ಗುಜರಾತ್ ಪ್ರದೇಶವೇ ಮೂಲವಾಗಿರುವ ಗಿರ್ ಒಂದು ಪ್ರಸಿದ್ಧ ತಳಿ. ಅದಕ್ಕೆ ಜ್ವರ ಬಂತೆಂದರೆ ಅತ್ಯಂತ ಇಷ್ಟವಾದ ಆಹಾರವನ್ನು ಎದುರಿಗಿಟ್ಟರೂ ಅದನ್ನು ಮೂಸಿಯೂ ನೋಡದೆ ನೀರನ್ನು ಮಾತ್ರ ಸೇವಿಸುತ್ತದೆ. ಆಯುರ್ವೆದ ಹೇಳುವಂತೆ ಜ್ವರವಿದ್ದಾಗ ಅಜೀರ್ಣವೂ ಜೊತೆಯಲ್ಲಿ ಇದ್ದೇ ಇರುತ್ತದೆ. ಆದುದರಿಂದಲೇ ಜ್ವರದ ಪ್ರಾರಂಭಿಕ ಹಂತದಲ್ಲಿ ‘ಲಂಘನಂ ಪರಮೌಷಧಂ’ ಎಂದಿರುವುದು. ಆಹಾರ ಸೇವಿಸದೇ ಇರುವುದರಿಂದ ಅಜೀರ್ಣವು ಹೋಗಿ ಪಚನಕ್ರಿಯೆ ಚುರುಕಾಗಿ ಜ್ವರವು ಕಡಿಮೆಯಾಗುತ್ತದೆ ಎಂಬುದು ತಾತ್ಪರ್ಯ. ಆಯುರ್ವೆದ ಓದಿರದ ಗಿರ್ ದನವು ಈ ಜ್ಞಾನವನ್ನು ಅದು ಹೇಗೋ ಪಡೆದುಕೊಂಡಿದೆ! ಜ್ವರ ಕಡಿಮೆಯಾಗುವ ತನಕ ಅಂದರೆ ನಾಲ್ಕಾರು ದಿನ ನೀರು ಮಾತ್ರ ಕುಡಿದು ಆರೋಗ್ಯ ಮರಳಿದೊಡನೆ ಮತ್ತೆ ಆಹಾರ ಸೇವಿಸಲು ಪ್ರಾರಂಭಿಸುತ್ತದೆ. ಪ್ರಾಣಿಗಳೇ ಅಜೀರ್ಣವನ್ನು ತಿಳಿದುಕೊಂಡಿರುವಾಗ ಬುದ್ಧಿಯಿರುವ ನಾವು ಅಜೀರ್ಣದ ಕುರಿತಾಗಿ ತಿಳಿದುಕೊಳ್ಳುವುದು ಕರ್ತವ್ಯವಾಗುತ್ತದೆ.

ಜೀರ್ಣಕ್ರಿಯೆಗೆ ಬೇಕಾಗುವ ಅಗ್ನಿಯ ವೈಪರೀತ್ಯಗಳಾದ ಮಂದಾಗ್ನಿ, ತೀಕ್ಷ್ಣಾಗ್ನಿ ಹಾಗೂ ವಿಷಮಾಗ್ನಿಗಳಿಂದ ಅಗ್ನಿಯು ಬಲಹೀನವಾಗಿ ಅಜೀರ್ಣವು ಉಂಟಾಗುತ್ತದೆ. ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಿದೆಯೇ ಎಂಬುದು ಕೆಲವೊಂದು ಲಕ್ಷಣಗಳಿಂದ ಸ್ಪಷ್ಟವಾಗುತ್ತದೆ. ತೇಗು ಬಂದರೆ ಅದು ಈ ಮೊದಲು ತಿಂದ ಆಹಾರದ ವಾಸನೆಯನ್ನು ಹೊಂದಿರದೆ ಶುದ್ಧವಾಗಿರಬೇಕು. ಮಲಮೂತ್ರಾದಿಗಳು ಪ್ರಾಕೃತವಾಗಿ ವಿಸರ್ಜನೆಯಾಗುತ್ತಿರಬೇಕು. ಹಸಿವು, ಬಾಯಾರಿಕೆಗಳು ಚೆನ್ನಾಗಿ ಉಂಟಾಗಬೇಕು. ಮಾನಸಿಕ ದಣಿವು, ಶರೀರ ಭಾರವಾದಂತೆ ಅನಿಸುವುದು, ಆಹಾರವು ಗತಿ ರಹಿತವಾಗುವುದು, ತಲೆತಿರುಗುವುದು, ಹೊಟ್ಟೆಯುಬ್ಬರ, ಮಲಬದ್ಧತೆ ಅಥವಾ ಬೇಧಿ ಉಂಟಾಗುವುದು ಅಜೀರ್ಣದ ಪ್ರಮುಖ ಲಕ್ಷಣಗಳು.

ಆಹಾರದ ವಿಷಮತೆಯಿಂದಾಗಿ ಜಠರಾಗ್ನಿಯಲ್ಲಿ ಏರುಪೇರಾಗಿ ಅಜೀರ್ಣವುಂಟಾಗಲು ಕಾರಣಗಳು ಹಲವಾರು. ಅತಿಯಾಗಿ ನೀರನ್ನು ಕುಡಿಯುವುದು ಮೊದಲ ಕಾರಣ. ಪ್ರತಿನಿತ್ಯ ಆರುಬಾರಿ ಪೂರ್ಣಪ್ರಮಾಣದಲ್ಲಿ ಮೂತ್ರ ಮಾಡುವಷ್ಟು ನೀರು ಸೇವಿಸಬೇಕೆಂಬುದು ಆಯುರ್ವೆದದ ಅಭಿಮತ. ನೀರಿನ ಸೇವನೆ ಕೆಲವರಲ್ಲಿ ಎರಡು ಲೋಟವೂ ಇರಬಹುದು, ಇನ್ನು ಕೆಲವರಲ್ಲಿ ಎರಡು ಲೀಟರ್ ಇರಬಹುದು. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಉಪಕಾರಕ್ಕಿಂತ ಉಪದ್ರವವೇ ಉಂಟಾಗುತ್ತದೆ. ಸರಿಯಾದ ಸಮಯ, ಪ್ರಮಾಣ, ಗುಣಗಳಿಂದ ಕೂಡಿರದ ಆಹಾರ ಸೇವನೆಗೆ ವಿಷಮಾಶನ ಎನ್ನುತ್ತೇವೆ. ಇದೂ ಅಜೀರ್ಣವನ್ನು ಉಂಟುಮಾಡುತ್ತದೆ. ಮಲಮೂತ್ರಾದಿ ದೇಹದ ಸಹಜ ವೇಗಗಳನ್ನು ತಡೆಹಿಡಿಯುವುದು ಮತ್ತೊಂದು ಕಾರಣ. ಹಗಲು ಹೊತ್ತಿನಲ್ಲಿ ನಿದ್ರಿಸುವುದು ಅಥವಾ ರಾತ್ರಿ ಕಾಲದಲ್ಲಿ ನಿದ್ರೆ ಮಾಡದಿರುವುದು ಅಜೀರ್ಣಕಾರಿ. ಇವೆಲ್ಲವುಗಳಿಂದ ಅಗ್ನಿಯು ಬಲ ಕಳೆದುಕೊಂಡು ಜೀರ್ಣಕ್ಕೆ ಸುಲಭವಾಗಿರುವ

ಆಹಾರವನ್ನೇ ಸೇವಿಸಿದರೂ ಅಜೀರ್ಣ ಉಂಟಾಗುತ್ತದೆ. ಅತಿ ಪ್ರಮಾಣದಲ್ಲಿ, ಅಪ್ರಿಯ, ಅತಿಬೇಯಿಸಿದ, ಸರಿಯಾಗಿ ಬೇಯಿಸಿರದ, ಒಣ, ಅತಿ ಶೀತಲ, ಅಶುಚಿಯಾದ, ನೀರಿನಲ್ಲಿ ಹೆಚ್ಚು ಕಾಲ ಮುಳುಗಿಸಿದ ಆಹಾರ ಸೇವನೆಯಿಂದ, ಪಥ್ಯ ಅಪಥ್ಯ ಆಹಾರವನ್ನು ಮಿಶ್ರಮಾಡಿ ಸೇವಿಸುವುದು, ಮೊದಲು ಸೇವಿಸಿದ ಆಹಾರ ಜೀರ್ಣವಾಗುವ ಮೊದಲೇ ಪುನಃ ಊಟ ಮಾಡುವುದರಿಂದ ಅಜೀರ್ಣ ಕಟ್ಟಿಟ್ಟ ಬುತ್ತಿ.

ಹಲವಾರು ಮಾನಸಿಕ ಸ್ಥಿತಿಗತಿಗಳಿಂದಲೂ ಅಜೀರ್ಣವಾಗುತ್ತದೆ. ಮತ್ಸರ, ಭಯ, ಕೋಪ, ಹತಾಶೆ, ದುರಾಸೆ, ಸಂಕಟ, ಅಸಹಾಯಕತೆ, ಆಹಾರ ಸೇವನೆಯ ಇಚ್ಛೆ ಇಲ್ಲದಿರುವುದು ಅಜೀರ್ಣವನ್ನು ತಂದೊಡ್ಡುತ್ತದೆ ಎಂದು ಸುಶ್ರುತ ಸಂಹಿತೆಯಲ್ಲಿ ವಿವರಿಸಲಾಗಿದೆ. ಚಿಂತೆ, ಬೇಸರ, ಹೆದರಿಕೆ, ಕೋಪ, ರಾತ್ರಿ ನಿದ್ರೆಗೆಡುವುದು ಮೊದಲಾದ ಚರ್ಯುಗಳಿಂದ ಸಮ್ಯಕ್ ಪ್ರಮಾಣ, ಗುಣದ ಪಥ್ಯಾಹಾರವನ್ನು ಸೇವಿಸಿದರೂ ಅಜೀರ್ಣಕ್ಕೆ ಎಡೆಮಾಡಿ ಕೊಡುತ್ತದೆ ಎಂದು ಚರಕಸಂಹಿತೆಯಲ್ಲಿ ಹೇಳಲಾಗಿದೆ. ಸೇವಿಸಿದ ಸಿಹಿ ಹಾಗೂ ಉಪ್ಪಿನ ರುಚಿಯ ಆಹಾರವು ಜೀರ್ಣವಾದ ಬಳಿಕ ಸಿಹಿ ರುಚಿಯ ವಿಪಾಕವನ್ನು ಹೊಂದುತ್ತದೆ. ಹುಳಿರುಚಿಯ ಆಹಾರವು ವಿಪಾಕವಾದಾಗಲೂ ಹುಳಿಯಾಗಿಯೇ ಉಳಿಯುತ್ತದೆ. ಕಹಿ, ಖಾರ, ಒಗರು ರುಚಿಯ ಆಹಾರದ್ರವ್ಯವು ವಿಪಾಕದಲ್ಲಿ ಖಾರ ರುಚಿಯನ್ನು ತಾಳುತ್ತದೆ. ಅಜೀರ್ಣವಿದ್ದಾಗ ಈ ವಿಪಾಕದ ಪ್ರಕ್ರಿಯೆಯು ಸಮರ್ಪಕವಾಗಿ ಆ ಹಂತವನ್ನು ತಲುಪುವುದಿಲ್ಲ.