ನ್ಯೂಸ್

ಪೊಲೀಸ್​ ಎಂದು ಜೀಪ್​ನಲ್ಲಿ ಬಂದ ಆರು ಜನ ಮಾಡಬಾರದ್ದನ್ನ ಮಾಡಿ ಸಿಕ್ಕಿಬಿದ್ದರು!

ಬೆಂಗಳೂರು: ಹಲಸೂರು ಗೇಟ್​ನ ನಗರ್ತಪೇಟೆಯ ಅಂಗಡಿಯೊಂದರ ಮೇಲೆ 6 ಜನರ ಪೊಲೀಸ್​ ತಂಡ ದಾಳಿ ನಡೆಸಿದ್ದರ ಅಸಲಿಯತ್ತು ಸಿಸಿ ಕ್ಯಾಮರಾದಲ್ಲಿ ಬಯಲಾಗಿದೆ.

ಚಿನ್ನಭರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರಿ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಕಲಿ‌ ಚಿನ್ನ ಮಾರಾಟ ಮಾಡಲಾಗುತ್ತಿದೆ ಎಂದು ದಾಳಿ ನಡೆಸಿದ ತಂಡವು ಭಾರೀ ಪ್ರಮಾಣದಲ್ಲಿ ವಂಚಿಸಿ ಸಿಕ್ಕಿಬಿದ್ದಿದೆ. ಅಸಲಿಗೆ ಆ ತಂಡ ಪೊಲೀಸ್​ ಅಲ್ಲವೇ ಅಲ್ಲ.

ನಾವು ಪೊಲೀಸರು, ಅಂಗಡಿಯನ್ನು ರೇಡ್​ ಮಾಡಲು ಬಂದಿದ್ದೇವೆ ಎಂದ ಪೊಲೀಸ್​ ಸೋಗಿನ ಖದೀಮರು, ಕೈಗೆ ಸಿಕ್ಕಿದ್ದೆಲ್ಲವನ್ನೂ ಅಂದರೆ ಬರೋಬ್ಬರಿ 800 ಗ್ರಾಂ ಚಿನ್ನಾಭರಣ ಮತ್ತು ದಾಖಲೆಯನ್ನು ದೋಚಿಕೊಂಡು, ದಾಳಿ ಬಳಿಕ ಅಂಗಡಿಯ ಕೆಲಸಗಾರನನ್ನ ಜೀಪ್​ನಲ್ಲಿ ಕೂರಿಸಿಕೊಂಡು ಸ್ವಲ್ಪ ದೂರದಲ್ಲಿ ಬಿಟ್ಟು ಹೋಗಿದ್ದಾರೆ.

ದಾಳಿ ವೇಳೆ ಕೋಲ್ಕತ್ತಾದಲ್ಲಿದ್ದ ಅಂಗಡಿ ಮಾಲೀಕನಿಗೆ ಕರೆ ಮಾಡಿದ ನಕಲಿ ಪೊಲೀಸರು, 'ನಿಮ್ಮ ಅಂಗಡಿ‌ ಮೇಲೆ ರೇಡ್ ಮಾಡಿದ್ದೇವೆ. ದಾಳಿ ವೇಳೆ ಸಿಕ್ಕ ದಾಖಲೆ ಬಗ್ಗೆ ವಿಚಾರಣೆ ಆಗಬೇಕಿದೆ. ಪೊಲೀಸ್ ಠಾಣೆಗೆ ಬನ್ನಿ' ಎಂದಿದ್ದರು. ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಗೀತಾ ಜುವೆಲ್ಲರ್​ ಮಾಲೀಕ ಕಾರ್ತಿಕ್, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಳಿ ಬಗ್ಗೆ ವಿಚಾರಿಸಿದಾಗ ಗೊತ್ತಾಯ್ತು ಅದು ನಕಲಿ ಪೊಲೀಸರ ಕೈಚಳಕ ಎಂದು.

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ದೂರು ದಾಖಲಿಸಿದ್ದಾರೆ. ದರೋಡೆಗೆ ನಕಲಿ ಪೊಲೀಸರು ತಂದಿದ್ದ ಜೀಪ್ ನಂಬರ್ ಅನ್ನು ಜುವೆಲ್ಲರಿ ಮಳಿಗೆಯ ಸಿಬ್ಬಂದಿ ಹೇಳಿದ್ದು, ಇದರ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರೆಲ್ಲರೂ ನಾಗಮಂಗಲ ಮೂಲದವರು. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಸೋಗಿನಲ್ಲಿ ಬಂದ ವಂಚಕರು ಅಂಗಡಿಯಲ್ಲಿ ಚಿನ್ನಾಭಾರಣ ದೋಚಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.