ನ್ಯೂಸ್

ವಿಶ್ವದ ಮೊದಲ ಎಐ ಸಾಫ್ಟ್​ವೇರ್ ಇಂಜಿನಿಯರ್ ಡೆವಿನ್!

Webdesk - Manjunatha B

ನವದೆಹಲಿ: ಕೇರಳದಲ್ಲಿ ಇತ್ತೀಚೆಗೆ ಎಐ (ಕೃತಕ ಬುದ್ಧಿಮತ್ತೆ) ಶಿಕ್ಷಕಿಯನ್ನು ನಿಯೋಜನೆ ಮಾಡಿರುವುದು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ಅಮೆರಿಕದ ಕಂಪನಿಯೊಂದು ಎಐ ಸಾಫ್ಟ್​ವೇರ್ ಇಂಜಿನಿಯರ್ ಒಂದನ್ನು ನಿರ್ಮಾಣ ಮಾಡಿದೆ. ಇದಕ್ಕೆ ಡೆವಿನ್ ಎಂದು ನಾಮಕರಣ ಮಾಡಲಾಗಿದೆ. ಇದು ಕೋಡ್ ಬರೆಯುವುದು, ವೆಬ್​ಸೈಟ್​ಗಳನ್ನು ರಚಿಸುವುದು ಸೇರಿ ಹಲವು ಕೆಲಸಗಳನ್ನು ನಿರ್ವಹಿಸಲಿದೆ. ಒಂದೇ ಪ್ರಾಂಪ್ಟ್ ಮೂಲಕ ಹಲವು ಕಾರ್ಯಗಳಿಗೆ ಈ ಎಐ ಇಂಜಿನಿಯರ್​ನನ್ನು ನಿಯೋಜನೆ ಮಾಡಬಹುದಾಗಿದೆ.

ಟೆಕ್ ಕಂಪನಿ ಕಾಗ್ನಿಷನ್ ಈ ಎಐ ಸಾಫ್ಟ್​ವೇರ್ ಇಂಜಿನಿಯರ್ ಅನ್ನು ನಿರ್ಮಾಣ ಮಾಡಿದೆ. ‘ನೀವು ಕೇಳುವ ಎಲ್ಲ ಕೆಲಸವನ್ನು ಇದು ಬಹುಮಟ್ಟಿಗೆ ಇದು ಮಾಡಬಹುದು. ಎಐ ಉಪಕರಣದ ಮೂಲಕ ಮಾನವ ಇಂಜಿನಿಯರ್​ಗಳನ್ನು ಬದಲಿಸುವ ಉದ್ದೇಶ ಇಲ್ಲ. ಇದು ಅವರಿಗೆ ಸಹಾಯ ಮಾಡಲಿದೆ ಅಷ್ಟೇ’ ಎಂದು ಕಂಪನಿ ಹೇಳಿದೆ. ಪ್ರಮುಖ ಎಐ ಕಂಪನಿಗಳ ಪ್ರಾಯೋಗಿಕ ಇಂಜಿನಿಯರಿಂಗ್ ಸಂದರ್ಶನಗಳನ್ನು ಇದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ತನ್ನದೇ ಆದ ಶೆಲ್, ಕೋಡ್ ಎಡಿಟರ್ ಮತ್ತು ವೆಬ್ ಬ್ರೌಸರ್​ನ ಬಳಕೆಯ ಮೂಲಕ ಇದು ಇಂಜಿನಿಯರಿಂಗ್ ಕಾರ್ಯಗಳನ್ನು ಮಾಡುತ್ತದೆ ಎಂದು ಕಾಗ್ನಿಷನ್ ಕಂಪನಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ತ್ವರಿತ ನಿರ್ಧಾರ: ಮುಂದಿನ ನಿರ್ಧಾರಗಳನ್ನು ಯೋಚಿಸುವ, ಸಂಕೀರ್ಣ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಡೆವಿನ್ ಹೊಂದಿದೆ. ಇದು ಸಾವಿರಾರು ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಿದೆ. ಪ್ರಾಥಮಿಕ ಹಂತದಲ್ಲಿ ಅದರ ತಪ್ಪುಗಳನ್ನು ತಿದ್ದಲಾಗುವುದು. ಕಾಲಾನಂತರದಲ್ಲಿ ಇದು ಮತ್ತಷ್ಟು ಉತ್ತಮಗೊಳ್ಳಲಿದೆ. ಮಾನವ ಇಂಜಿನಿಯರ್​ಗೆ ಸಮಾನವಾದ ಎಲ್ಲ ಸಾಧನಗಳನ್ನು ಇದು ಹೊಂದಿದೆ. ಸಾಫ್ಟ್​ವೇರ್ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದೆ. ಆದರೆ ಡೆವಿನ್ ಸ್ವಂತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಮಾನವ ಇಂಜಿನಿಯರ್​ಗಳ ನಿಯಂತ್ರಣ ಅಗತ್ಯ. ನೈಜ-ಸಮಯದಲ್ಲಿ ನವೀಕರಣ, ಪ್ರತಿಕ್ರಿಯೆಯನ್ನು ಸ್ವೀಕರಿಸಲು, ವಿನ್ಯಾಸದ ಆಯ್ಕೆ ಇನ್ನಿತರ ಕ್ರಿಯೆಗಳಿಗೆ ಇದನ್ನು ನಿಯೋಜನೆ ಮಾಡಬಹುದು. ಆದ್ದರಿಂದ ಮನುಷ್ಯರ ಬದಲು ಕೇವಲ ಎಐ ಇಂಜಿನಿಯರ್ ಬಳಕೆ ಬಹುತೇಕ ಅಸಾಧ್ಯವಾಗಿದೆ ಎಂದು ಕಂಪನಿ ಹೇಳಿದೆ.

ಏನೇನು ಕೆಲಸ?

  • ಹೊಸ ತಂತ್ರಜ್ಞಾನಗಳ ಕಲಿಕೆ
  • ಪ್ರಾರಂಭದಿಂದ ಅಂತ್ಯದವರೆಗೆ ಅಪ್ಲಿಕೇಶನ್​ಗಳನ್ನು ನಿರ್ವಿುಸುವುದು, ನಿಯೋಜಿಸುವುದು
  • ಕೋಡ್​ನಲ್ಲಿನ ದೋಷಗಳನ್ನು ಪತ್ತೆಮಾಡಿ, ಸರಿಪಡಿಸುವುದು
  • ಓಪನ್ ಸೋರ್ಸ್ ಯೋಜನೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದು
  • ನೈಜ ಸವಾಲುಗಳ ಪರೀಕ್ಷೆ, ಪರಿಹಾರ ಯತ್ನ
  • ಅಪ್​ವರ್ಕ್​ನಂತಹ ಪ್ಲಾಟ್​ಫಾಮರ್್​ಗಳಲ್ಲಿ ಇದರ ಬಳಕೆ
  • ಕೋಡಿಂಗ್ ಕಾರ್ಯಗಳನ್ನು ಸುಲಭವಾಗಿ ನಿಭಾಯಿಸುತ್ತದೆ
  • ಡೀಬಗ್ ಮಾಡುವುದರಿಂದ ಹಿಡಿದು ವಿವರವಾದ ವರದಿಗಳನ್ನು ಕಂಪೈಲ್ ಮಾಡುವವರೆಗೆ ಹಲವು ಕೆಲಸವನ್ನು ಇದು ನಿಭಾಯಿಸಬಲ್ಲದು.