ನ್ಯೂಸ್

ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

ಲಂಡನ್​: ಕರೊನಾ ಮೂರನೇ ಅಲೆ ಪ್ರವೇಶ ಮಾಡಿರುವ ಹೊತ್ತಿನಲ್ಲಿ ಬಹುತೇಕ ಎಲ್ಲರೂ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೆ, ಇನ್ನು ಕೆಲವರು ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಯೋಚನೆಯಲ್ಲಿದ್ದಾರೆ. ಮತ್ತೊಂದೆಡೆ 15ರಿಂದ 18ನೇ ವಯಸ್ಸಿನವರಿಗೆ ಲಸಿಕೀಕರಣ ಆರಂಭವಾಗಿದ್ದರೆ, ಇನ್ನೊಂದೆಡೆ 12ರಿಂದ 14ರ ವಯಸ್ಸಿನವರಿಗೂ ಮಾರ್ಚ್​ನಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಯುತ್ತಿದೆ.

ಈ ನಡುವೆ ಎರಡು ಡೋಸ್ ಲಸಿಕೆ ತೆಗೆದುಕೊಂಡರೂ ನೆಮ್ಮದಿ ಇಲ್ಲ ಎಂಬಂಥ ಅಂಶವೊಂದು ಹೊರಬಿದ್ದಿದೆ. ಅದರಲ್ಲೂ ಈ ಅಧ್ಯಯನದ ಅಂಶವನ್ನು ಯುಕೆ ಸರ್ಕಾರವೂ ಒಪ್ಪಿಕೊಂಡಿದ್ದು, ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಯುಕೆ ಆರೋಗ್ಯ ಇಲಾಖೆಗೆ ಸಲ್ಲಿಕೆ ಆಗಿರುವ 'ಕೋವಿಡ್​-19 ವ್ಯಾಕ್ಸಿನ್​ ಸರ್ವೆಯಲೆನ್ಸ್ ರಿಪೋರ್ಟ್​'ನಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಎರಡೂ ಡೋಸ್ ಲಸಿಕೆ ಪಡೆದಿರುವವರಲ್ಲಿ ಸಹಜ ರೋಗನಿರೋಧಕ ಶಕ್ತಿ ಲಸಿಕೆಯಿಂದಾಗಿ ಹಾನಿಗೊಂಡಿದೆ ಎಂಬುದನ್ನು ಯುಕೆ ಸರ್ಕಾರ ಒಪ್ಪಿದೆ.

ಒಮ್ಮೆ ಎರಡೂ ಡೋಸ್ ಲಸಿಕೆ ಪಡೆದುಕೊಂಡರೆ ಕೋವಿಡ್-19 ಅಥವಾ ಯಾವುದೇ ಇತರ ವೈರಸ್​ ವಿರುದ್ಧ ಸಂಪೂರ್ಣ ಸಹಜ ರೋಗನಿರೋಧಕ ಶಕ್ತಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಈ ವರದಿಯ ಅಂಶಗಳಲ್ಲಿ ಕಂಡುಬಂದಿದೆ. ಎರಡು ಡೋಸ್ ಲಸಿಕೆ ಪಡೆದ ಬಳಿಕ ಸೋಂಕಿಗೆ ಒಳಗಾದವರಲ್ಲಿ ಎನ್​ ಆ್ಯಂಟಿಬಾಡಿ ಮಟ್ಟ ತಗ್ಗಿರುವುದು ಕಂಡುಬಂದಿದೆ. ಮಾತ್ರವಲ್ಲ ಲಸಿಕೆ ಪಡೆಯದವರಿಗಿಂತ ಲಸಿಕೆ ಪಡೆದ ವಯಸ್ಕರೇ ಸೋಂಕಿಗೆ ಹೆಚ್ಚಾಗಿ ಒಳಗಾಗುತ್ತಿರುವುದು ಕೂಡ ಈ ವರದಿಯಲ್ಲಿ ಕಂಡುಬಂದಿದೆ.

ಮುಂದೆ ಸೋಂಕಿಗೆ ಒಳಗಾದಾಗ ವೈರಸ್​​ನ ಸ್ಪೈಕ್ ಪ್ರೊಟೀನ್ ಅಥವಾ ಅದರ ಇತರ ಯಾವುದೇ ಭಾಗದ ವಿರುದ್ಧ ದೇಹ ಆ್ಯಂಟಿಬಾಡಿ ಉತ್ಪಾದಿಸುವ ಸಾಮರ್ಥ್ಯವನ್ನು ಈ ಲಸಿಕೆ ಕುಗ್ಗಿಸುತ್ತದೆ ಎಂಬುದನ್ನೂ ಈ ವರದಿ ಹೊರಗೆಡಹಿದೆ. ಹೀಗಾಗಿ ಲಸಿಕೀಕರಣಕ್ಕೆ ಒಳಗಾದವರು ಈಗಾಗಲೇ ಸೋಂಕಿಗೆ ಒಳಗಾಗಿ ಗುಣವಾಗಿದ್ದರೂ ಮುಂದೆ ಯಾವುದೇ ರೂಪಾಂತರಿ ವೈರಸ್​ಗೆ ಬೇಗ ತುತ್ತಾಗುವ ಸಾಧ್ಯತೆ ಇರುತ್ತದೆ ಎಂಬುದೂ ಕಂಡುಬಂದಿದೆ.

ಮತ್ತೊಂದೆಡೆ ಲಸಿಕೆ ಪಡೆಯದವರು ಒಮ್ಮೆ ಸೋಂಕಿಗೆ ಒಳಗಾದರೆ ಸಂಬಂಧಿತ ವೈರಸ್​ನ ಎಲ್ಲ ವರ್ಗದ ಸೋಂಕಿಗೂ ಶಾಶ್ವತವಲ್ಲದಿದ್ದರೂ ದೀರ್ಘಕಾಲೀನ ರೋಗನಿರೋಧಕ ಶಕ್ತಿ ಪಡೆದಿರುತ್ತಾರೆ ಎನ್ನಲಾಗಿದೆ.