ನ್ಯೂಸ್

ಅಯ್ಯೋ ದುರ್ವಿಧಿಯೇ! 15 ಲಕ್ಷಕ್ಕೆ ಗಣೇಶನ ಲಡ್ಡು ಪ್ರಸಾದ ಖರೀದಿಸಿದ ಬೆನ್ನಲ್ಲೇ ಟೆಕ್ಕಿಗೆ ಕಾದಿತ್ತು ಬಿಗ್​ ಶಾಕ್​

ಹೈದರಾಬಾದ್​: ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬ ಮುಗಿದಿದೆ. ಆದರೆ, ನಗರ ಪ್ರದೇಶಗಳಲ್ಲಿ ಮಾತ್ರ ಹಬ್ಬ ಇನ್ನು ಮುಂದುವರಿದಿದೆ. ಒಂದೊಂದು ಏರಿಯಾದಲ್ಲಿ ಒಂದೊಂದು ದಿನ ಗಣಪನ ಮೂರ್ತಿ ಕೂರಿಸುತ್ತಿದ್ದಾರೆ. ಹೈದರಾಬಾದ್​ ನಗರದಲ್ಲಿಯೂ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಗಣೇಶ ಮೂರ್ತಿಯ ನಿಮಜ್ಜನ ಮೆರವಣಿಗೆಯಲ್ಲಿ ಅನೇಕರು ಪಾಲ್ಗೊಂಡು ಕುಣಿದು ಕುಪ್ಪಳಿಸುತ್ತಿದ್ದಾರೆ. ಕೆಲವೆಡೆ ನಿಮಜ್ಜನಕ್ಕೂ ಮುನ್ನ ಲಡ್ಡು ಪ್ರಸಾದ ಹರಾಜು ನಡೆಯುತ್ತದೆ. ಈ ಹರಾಜಿನಲ್ಲಿ ಸಾಮಾನ್ಯರಿಂದ ಹಿಡಿದು ಶ್ರೀಮಂತರು ಭಾಗವಹಿಸಿ ವಿಘ್ನೇಶ್ವರನ ಲಡ್ಡು ಪ್ರಸಾದವನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಾರೆ. ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ಹರಾಜಿನಲ್ಲಿ ಲಡ್ಡು ಪ್ರಸಾದ ಖರೀದಿ ಮಾಡಿದ ಟೆಕ್ಕಿ ಮರುಕ್ಷಣವೇ ದುರಂತ ಸಾವಿಗೀಡಾಗಿರುವುದು ವಿಧಿತ ಕ್ರೂರತನಕ್ಕೆ ಸಾಕ್ಷಿಯಾಗಿದೆ.

ಹೈದರಾಬಾದ್‌ನ ಮಣಿಕೊಂಡ ಅಲ್ಕಾಪುರಿ ಕಾಲನಿಯಲ್ಲಿ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಗಣೇಶನ ಲಡ್ಡು ಪ್ರಸಾದ ಹರಾಜಿ ಗೆದ್ದ ಕೆಲವೇ ಕ್ಷಣಗಳಲ್ಲಿ ಟೆಕ್ಕಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ಸಾವು ಟೆಕ್ಕಿ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಮಣಿಕೊಂಡ ಅಲಕಾಪುರಿ ಕಾಲನಿಯಲ್ಲಿ ವಾಸವಾಗಿರುವ ಶ್ಯಾಮ್ ಪ್ರಸಾದ್, ಪ್ರಮುಖ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶ್ಯಾಮ್ ಪ್ರಸಾದ್ ಅವರು ತಂಗಿದ್ದ ಕಾಲನಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.15ರಂದು ಒಂಬತ್ತನೇ ದಿನಕ್ಕೆ ನಿಮಜ್ಜನಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಬಾರಿಯ ನಿಮಜ್ಜನ ಸಮಾರಂಭದಲ್ಲಿ ಲಡ್ಡು ಪ್ರಸಾದವನ್ನು ಹರಾಜು ಹಾಕಲಾಯಿತು. ಶ್ಯಾಮ್ ಪ್ರಸಾದ್ ಅವರು ಬರೋಬ್ಬರಿ 15 ಲಕ್ಷ ರೂಪಾಯಿಗೆಯ ಲಡ್ಡೂ ಪ್ರಸಾದವನ್ನು ಗೆದ್ದರು.

ಹರಾಜಿನಲ್ಲಿ ಲಡ್ಡು ಪ್ರಸಾದ ಗೆದ್ದ ಖುಷಿಯಲ್ಲಿ ಶ್ಯಾಮ್ ಪ್ರಸಾದ್ ಕಾಲನಿ ನಿವಾಸಿಗಳೊಂದಿಗೆ ಮಂಟಪದಲ್ಲಿ ಕೆಲಕಾಲ ಕುಣಿದು ಕುಪ್ಪಳಿಸಿದರು. ಡಾನ್ಸ್​ ಮಾಡಿ ಸಂಭ್ರಮಿಸಿದ ಬಳಿಕ ಶ್ಯಾಮ್, ಲಡ್ಡು ಪ್ರಸಾದ ತೆಗೆದುಕೊಂಡು ಮನೆಗೆ ತೆರಳಿ ಮನೆಯವರೊಂದಿಗೆ ಸಂತಸ ಹಂಚಿಕೊಂಡರು. ಡಾನ್ಸ್​ ಮಾಡಿ ಸುಸ್ತಾಗಿದ್ದ ಶ್ಯಾಮ್, ಸೋಫಾದಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದರು. ಆದರೆ, ಅದೇ ವೇಳೆಗೆ ಎದೆಯಲ್ಲಿ ನೋವು ಕಾಣಿಸಿಕೊಂಡು ಹಠಾತ್ತನೇ ಕುಸಿದು ಬಿದ್ದರು. ಕೂಡಲೇ ಆತನ ಮನೆಯವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು.

ವೈದ್ಯರು, ಶ್ಯಾಮ್ ಅವರನ್ನು ಪರೀಕ್ಷಿಸಿದಾಗ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿದರು. ಮೋಜು ಮಸ್ತಿ ಮಾಡಿದ ಮರುಕ್ಷಣದಲ್ಲೇ ಶ್ಯಾಮ್ ಅವರ ದುರಂತ ಸಾವು ಕಾಲನಿ ನಿವಾಸಿಗಳಲ್ಲಿ ಆಘಾತವನ್ನು ಉಂಟುಮಾಡಿದೆ. ಇತ್ತ ಮನೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ತೀವ್ರ ಶೋಕದಲ್ಲಿ ಮುಳುಗಿದ್ದಾರೆ. ನಿಜಕ್ಕೂ ಈ ಘಟನೆ ವಿಧಿಯ ಕ್ರೂರತನಕ್ಕೆ ಹಿಡಿದ ಕನ್ನಡಿಯಾಗಿದೆ. (ಏಜೆನ್ಸೀಸ್​)