ನ್ಯೂಸ್

ಈತ ಶಾಲೆಯಲ್ಲಿ ಮಾಡಬಾರದ್ದನ್ನೆಲ್ಲ ಮಾಡ್ತಿದ್ದ; ಕೊನೆಗೂ ವಿಡಿಯೋ ವೈರಲ್​ ಆಗಿ ಅಮಾನತುಗೊಂಡ...

ಆಂಧ್ರಪ್ರದೇಶ: ಶಾಲೆ ಎಂಬುದು ದೇವಸ್ಥಾನದಂತೆ, ಪವಿತ್ರ ಸ್ಥಳ. ಅಲ್ಲೊಂದು ಶಿಸ್ತು-ಸಂಯಮ ಇರಲೇಬೇಕಾಗುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕ ಮಾಡಬಾರದ್ದನ್ನೆಲ್ಲ ಶಾಲೆಯಲ್ಲೇ ಮಾಡಿ ಕೊನೆಗೂ ಅಮಾನತುಗೊಂಡಿದ್ದಾನೆ.

ಕಳೆದ ಕೆಲವು ದಿನಗಳಿಂದ ಈತ ಶಾಲೆಯಲ್ಲಿ ದುರ್ವರ್ತನೆ ತೋರುತ್ತಿದ್ದು, ಕೊನೆಗೆ ಮಕ್ಕಳ ಪಾಲಕರೊಬ್ಬರು ಮಾಡಿದ ವಿಡಿಯೋ ವೈರಲ್​ ಆಗಿ ಸಿಕ್ಕಿಬಿದ್ದಿದ್ದು, ಶಿಕ್ಷಣ ಇಲಾಖೆ ಈತನನ್ನು ಅಮಾನತುಗೊಳಿಸಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಶಿಕ್ಷಕ ಕೆ. ಕೋಟೇಶ್ವರ ರಾವ್ ಸಸ್ಪಂಡ್​ ಆಗಿರುವ ಶಿಕ್ಷಕ. ಪಲಕಮಂಡಲ್​ನ ಕೃಷ್ಣಪುರಂ ಎಂಬಲ್ಲಿರುವ ಮಂಡಲ್ ಪರಿಷದ್​ ಪ್ರಾಥಮಿಕ ಶಾಲೆಯಲ್ಲಿ ಈತ ಶಿಕ್ಷಕನಾಗಿದ್ದ.

ಶಾಲೆಯಲ್ಲಿ ಮಕ್ಕಳ ಮುಂದೆಯೇ ನಿತ್ಯ ಮದ್ಯಪಾನ ಮಾಡುತ್ತಿದ್ದ ಈತ, ಶಾಲೆಯ ಶೌಚಗೃಹದಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟು, ಆಗಾಗ ಕುಡಿಯುತ್ತಿದ್ದ. ಶಿಕ್ಷಕನ ಈ ದುರ್ವರ್ತನೆಯಿಂದ ಬೇಸತ್ತಿದ್ದ ಮಕ್ಕಳು ತಮ್ಮ ಪಾಲಕರಿಗೆ ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನ ಪಾಲಕರು ಶಾಲೆಗೆ ಬಂದು ವಿಚಾರಿಸುವಾಗಲೂ ಈತ ಶಾಲೆಯಲ್ಲಿ ಕುಡಿಯುತ್ತಿದ್ದ. ವಿಡಿಯೋ ಮಾಡಿದರೂ ಲೆಕ್ಕಿಸದ ಈತ ಆಕೆಯ ಮುಂದೆಯೇ ವಿವಸ್ತ್ರನಾಗುವುದಾಗಿ ಹೇಳಿದ್ದ. ಆಗ ಆಕೆ ಶಿಕ್ಷಕನ ವಿರುದ್ಧ ಧ್ವನಿ ಎತ್ತುವಂತೆ ಮಕ್ಕಳಿಗೆ ಹೇಳಿದಾಗ, ಆತ ಒಬ್ಬ ವಿದ್ಯಾರ್ಥಿಗೆ ಬಟ್ಟೆ ಬಿಚ್ಚುವ ಶಿಕ್ಷೆ ವಿಧಿಸಿದ್ದ. ಶಿಕ್ಷಕ ಕುಡಿದ ಬಳಿಕ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬುದಾಗಿ ಮಕ್ಕಳು ಆರೋಪಿಸಿದ್ದು, ಈ ವಿಡಿಯೋ ವೈರಲ್​ ಆದ ಹಿನ್ನೆಲೆಯಲ್ಲಿ ಆತನನ್ನು ಅಮಾನತುಗೊಳಿಸಲಾಗಿದೆ.