PM Modi : ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಅನೇಕ ಜನರು ಕೂದಲೆಳೆಯ ಅಂತರದಲ್ಲಿ ಪಾರಾದರು. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ನೋವು ಇನ್ನೂ ಹಾಗೇ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, 100ಕ್ಕೂ ಅಧಿಕ ಭಯೋತ್ಪಾದಕರನ್ನು ಕೊಂದಿತು. ಈ ಕಾರ್ಯಾಚರಣೆಯ ಬಗ್ಗೆ ಭಾರತೀಯ ಮೂಲದ ಸಿಂಗಾಪುರ್ ಮಹಿಳೆ ವೈಶಾಲಿ ಭಟ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಪಹಲ್ಗಾಮ್ ದಾಳಿಯ ದಿನ ಆ ಪ್ರದೇಶದಲ್ಲಿದ್ದವರಲ್ಲಿ ಭಾರತೀಯ ಮೂಲದ ಸಿಂಗಾಪುರದ ಪ್ರಜೆ ವೈಶಾಲಿ ಭಟ್ ಕೂಡ ಒಬ್ಬರು. ಅವರು ದಾಳಿ ಪ್ರಾರಂಭವಾಗುವ ಸ್ವಲ್ಪ ಸಮಯಕ್ಕೂ ಮೊದಲೇ ಬೈಸರನ್ ಕಣಿವೆಯನ್ನು ತೊರೆದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡ ಕಳಚಲು ಜನತಾದಳ (ಸಂಯುಕ್ತ) ದ ಸಂಸದ ಸಂಜಯ್ ಝಾ ನೇತೃತ್ವದ ಸರ್ವಪಕ್ಷ ನಿಯೋಗ ವಿದೇಶಗಳಿಗೆ ಪ್ರಯಾಣಿಸುತ್ತಿವೆ. ಇದೀಗ ಸಿಂಗಾಪುರಕ್ಕೆ ಭೇಟಿ ನೀಡಿದ್ದು, ಈ ವೇಳೆ ಬಿಜೆಪಿ ಸಂಸದ ಹೇಮಾಂಗ್ ಜೋಶಿ ಬಳಿ ತನಗಾದ ಕಹಿ ಅನುಭವವನ್ನು ವೈಶಾಲಿ ಭಟ್ ಹೇಳಿಕೊಂಡರು.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದೂವರೆ ಗಂಟೆ ಮೊದಲು ತನ್ನ ಪತಿಯೊಂದಿಗೆ ಬೈಸರನ್ ಕಣಿವೆಯನ್ನು ತೊರೆದಿದ್ದೆ. ಇಲ್ಲದಿದ್ದರೆ, ತನ್ನ ಪತಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ನಂತರ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸುದ್ದಿಯನ್ನು ನೋಡಿ ಭಯಭೀತಳಾಗಿದ್ದೆ. ನಾನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದೇನೆ ಎಂದರು.
ಭಯೋತ್ಪಾದಕ ದಾಳಿಯ ಸುದ್ದಿಯನ್ನು ನೋಡಿದ ನಂತರ ನಾನು ಆಘಾತಕ್ಕೊಳಗಾಗಿದ್ದೆ. ಮೇ 7ರಂದು ಭಾರತ ಆಪರೇಷನ್ ಸಿಂಧೂರವವನ್ನು ಪ್ರಾರಂಭಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಭಯೋತ್ಪಾದಕ ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡವರಿಗೆ ಆಪರೇಷನ್ ಸಿಂಧೂರ ಪರಿಹಾರವಾಗಿದೆ. ಆಪರೇಷನ್ ಸಿಂಧೂರ ಎಂದು ಹೆಸರಿಸುವುದು ಸೂಕ್ತವಾಗಿದೆ. ಈ ಕಾರ್ಯಾಚರಣೆ ಕೈಗೊಂಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಎಂದು ವೈಶಾಲಿ ಭಟ್ ಹೇಳಿದರು.
ಅಂದಹಾಗೆ, ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಅದಾದ ನಂತರ, ಭಾರತ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ನಿಲ್ಲಿಸಿತು. ಪಾಕಿಸ್ತಾನಿ ವೀಸಾಗಳನ್ನು ರದ್ದುಗೊಳಿಸಿತು. ಅಟ್ಟಾರಿ ಗಡಿಯನ್ನು ಮುಚ್ಚಿತು. ನಂತರ ಮೇ 7 ರಂದು ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ 100 ಭಯೋತ್ಪಾದಕರು ಕೊಲ್ಲಲ್ಪಟ್ಟರು. ಪಾಕಿಸ್ತಾನದ ವಾಯುನೆಲೆಗಳು ನಾಶವಾದವು. (ಏಜೆನ್ಸೀಸ್)